ಹುಬ್ಬಳ್ಳಿ: ಒಂದೂವರೆ ವರ್ಷದ ಹಿಂದೆ ಬಾಲ್ಯ ವಿವಾಹಕ್ಕೆ ಒಳಗಾಗಿದ್ದ ಅಪ್ರಾಪ್ತ ಯುವತಿ ಐಶ್ವರ್ಯ ಸಂಶಯಾಸ್ಪದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಗೋಪನಕೊಪ್ಪದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಕೆಂಗೇರಿಮಡ್ಡಿ ಮೂಲದ ಐಶ್ವರ್ಯ ಅಲಿಯಾಸ್ ಕಾವೇರಿ ಯಂಕಪ್ಪ ಬಂಡಿವಡ್ಡರ (16) ಮೃತಪಟ್ಟವಳು. ಒಂದೂವರೆ ವರ್ಷದ ಹಿಂದೆ ಇಲ್ಲಿನ ವಡ್ಡರ ಓಣಿಯ ಮುತ್ತುರಾಜ ಸುಳ್ಳದ ಎಂಬಾತ ಐಶ್ವರ್ಯಳನ್ನು ವಿವಾಹವಾಗಿದ್ದ.
ಈ ಬಗ್ಗೆ ಮಾಹಿತಿ ಪಡೆದ ಬಾಗಲಕೋಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಐಶ್ವರ್ಯಳ ಪಾಲಕರನ್ನು ಕಚೇರಿಗೆ ಕರೆಸಿದ್ದರು. ಐಶ್ವರ್ಯಳಿಗೆ 18 ವರ್ಷ ಆಗುವವರೆಗೆ ಗಂಡನ ಮನೆಗೆ ಕಳುಹಿಸಬಾರದೆಂದು ತಾಕೀತು ಮಾಡಿದ್ದರು. ಆದರೆ ಮುತ್ತುರಾಜ ಸಿದ್ಧಾರೂಢರ ಜಾತ್ರೆಯ ನೆಪ ಹೇಳಿ ಹುಬ್ಬಳ್ಳಿಗೆ ಕರೆತಂದಿದ್ದ.
ಆದರೆ ಐಶ್ವರ್ಯ ಗಂಡನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮುತ್ತುರಾಜ ಸಂಬಂಧಿಕರು ಹೇಳಿದ್ದಾರೆ. ಆದರೆ ಕುಟುಂಬದವರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಪೋಲೀಸ್ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Kshetra Samachara
08/03/2022 09:39 am