ಧಾರವಾಡ: ತಮಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಧಾರವಾಡದ ಲೋಕೋಪಯೋಗಿ ಇಲಾಖೆಯ ಸೆಕ್ಷನ್ ಆಫೀಸರ್ ಒಬ್ಬರು, ಇಬ್ಬರು ಗುತ್ತಿಗೆದಾರರ ಮೇಲೆ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.
ಸೆಕ್ಷನ್ ಆಫೀಸರ್ ರಾಘವೇಂದ್ರ ದೊಡಮನಿ ಎಂಬುವವರು ಗುತ್ತಿಗೆದಾರರಾದ ರಾಮು ದೊಡಮನಿ ಹಾಗೂ ರಾಜು ಅಂಬೋರೆ ಎಂಬುವವರ ಮೇಲೆ ಜಾತಿ ನಿಂದನೆ ದೂರು ದಾಖಲು ಮಾಡಿದ್ದಾರೆ.
ರಾಘವೇಂದ್ರ ಅವರು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರ ಪ್ರಭಾರ ತಾಲೂಕಾ ಆಫೀಸರ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಗುತ್ತಿಗೆದಾರರಾದ ರಾಮು ದೊಡಮನಿ ಹಾಗೂ ರಾಜು ಅಂಬೋರೆ ಅವರು, ಕಲಘಟಗಿ ತಾಲೂಕಿನ ಜ್ಯುಡಿಶಿಯಲ್ ಕ್ವಾರ್ಟರ್ಸ್ ಕಾಮಗಾರಿಯ ಟೆಂಡರ್‌ನ್ನು ತಮಗೆ ನೀಡುವಂತೆ ಒತ್ತಡ ಹಾಕಿದ್ದರು. ಇದಕ್ಕೆ ಒಪ್ಪದೇ ಇದ್ದಾಗ ಇಬ್ಬರೂ ಗುತ್ತಿಗೆದಾರರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ರಾಘವೇಂದ್ರ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೇ ಲೋಕನಾಥ ಹಿಂಡಸಗೇರಿ ಅವರ ಹೆಸರಿನಲ್ಲಿ ನನ್ನ ವಿರುದ್ಧ ಪತ್ರ ಬರೆದು ರಾಜ್ಯಪಾಲರಿಗೂ ಈ ಇಬ್ಬರೂ ಗುತ್ತಿಗೆದಾರರು ದೂರು ನೀಡಿದ್ದಾರೆ. ಇದು ಸುಳ್ಳು ಆರೋಪವಾಗಿದೆ. ಈ ಸಂಬಂಧ ಆರೋಪಿತರನ್ನು ವಿಚಾರಣೆಗೊಳಪಡಿಸಬೇಕು ಎಂದು ರಾಘವೇಂದ್ರ ಆಗ್ರಹಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
07/02/2022 07:32 pm