ಹುಬ್ಬಳ್ಳಿ: 'ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಲಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಸರಿಪಡಿಸಿಕೊಳ್ಳಿ' ಎಂದು ಅಪರಿಚಿತನೊಬ್ಬ ಧಾರವಾಡದ ವೈದ್ಯರೊಬ್ಬರಿಗೆ ಸಂದೇಶ ಕಳುಹಿಸಿ ಅವರ ಖಾತೆಯಿಂದ 1.25 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಧಾರವಾಡದ ಕೆಲಗೇರಿ ರಸ್ತೆ ಗ್ರೀನ್ ವೀವ್ ಲೇಔಟ್ ನಿವಾಸಿ ಡಾ. ಎಸ್.ವಿ. ಸಮಗಾರ ಮಚನೆಗೀಡಾದವರು. ಗುರುವಾರ ಸಮಗಾರ ಅವರ ಮೊಬೈಲ್‌ಗೆ ಅಪರಿಚಿತರಿಂದ ಸಂದೇಶ ಬಂದಿತ್ತು. 'ಪ್ರಿಯ ಗ್ರಾಹಕರೇ, ಇಂದು ನಿಮ್ಮ ಎಸ್‌ಬಿಐ ಯೋನೊ ಅಕೌಂಟ್ ಬ್ಲಾಕ್ ಆಗಲಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಪಾನ್ ಕಾರ್ಡ್ ಅಪ್ಲೇಟ್ ಮಾಡಿಕೊಳ್ಳಿ' ಎಂದು ಲಿಂಕ್ ಕಳುಹಿಸಿದ್ದರು.
ನೆಟ್ ಬ್ಯಾಂಕಿಂಗ್ ಬಂದ್ ಆಗಬಹುದು ಎಂದು ಗಾಬರಿಗೊಂಡ ಸಮಗಾರ ಅವರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು. ಮೊಬೈಲ್‌ಫೋನ್‌ಗೆ ಬಂದ ಒಟಿಪಿ ಹಾಕಿ ಸಬ್‌ಮಿಟ್ ಮಾಡಿದ್ದರು. ಬಳಿಕ ಹಂತ ಹಂತವಾಗಿ ಸಮಗಾರ ಅವರ ಖಾತೆಯಿಂದ ವಂಚಕರು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/01/2022 10:25 am