ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ನಗ್ನ ಫೋಟೋ ವಾಟ್ಸಾಫ್ ಸ್ಟೇಟಸ್‌ಗೆ ಇಟ್ಟು ವಿಕೃತಿ ಮೆರೆದಿದ್ದ ಯುವಕನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಶಿರಡಿ ಮೂಲದ ಶುಭಂ ಮಧುಕರ ಕೂಲೆ ಬಂಧಿತ ಯುವಕ. ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಶುಭಂ ಅದೇ ಕಾಲೇಜಿನ ಜೂನಿಯರ್ ವಿದ್ಯಾರ್ಥಿನಿ (20 ವರ್ಷದ ಯುವತಿಯ) ಸ್ನೇಹ ಸಂಪಾದಿಸಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ ವಾಟ್ಸಾಪ್ ನಂಬರ್ ಪಡೆದಿದ್ದ. ಚಾಟಿಂಗ್ ಮೂಲಕ ಸಲುಗೆ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ವಿಡಿಯೋ ಕಾಲ್ ವೇಳೆ ಯುವತಿಯ ನಗ್ನ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದ.
ಆರೋಪಿ ಶುಭಂ ನಗ್ನ ವಿಡಿಯೋದ ಸ್ಕ್ರೀನ್ ಶಾರ್ಟ್ ತೆಗೆದು, ಆ ಫೋಟೋವನ್ನು ಎಡಿಟ್ ಮಾಡಿ ನ. 11ರಂದು ಸ್ಟೇಟಸ್‌ಗೆ ಹಾಕಿದ್ದ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Kshetra Samachara
17/11/2021 02:15 pm