ಧಾರವಾಡ: ಇತ್ತೀಚೆಗಷ್ಟೆ ವಿದ್ಯಾರ್ಥಿನಿಯರಿಗೆ ಅಸಭ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಮಾತನಾಡಿದ್ದ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರ ವಿರುದ್ಧ ರಾಮಸೇನೆ ಕಾರ್ಯಕರ್ತರು ಹಾಗೂ ಬಹುಜನ ಅಂಬೇಡ್ಕರ್ ಸೇನೆ ಕಾರ್ಯಕರ್ತರು ದೂರು ದಾಖಲಿಸಲು ಮುಂದಾಗಿದ್ದಾರೆ.
ಇತ್ತೀಚೆಗಷ್ಟೆ ಕಾಲೇಜಿನ ಪ್ರಾಚಾರ್ಯ ಎಸ್.ವಿ.ಪಾಟೀಲ ಅವರು, ವಿದ್ಯಾರ್ಥಿನಿಯರಿಗೆ ಅಶ್ಲೀಲ ಪದಗಳನ್ನು ಬಳಸಿ ಮಾತನಾಡಿದ ವೀಡಿಯೋವೊಂದು ವೈರಲ್ ಆಗಿತ್ತು. ಈ ಸಂಬಂಧ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಶಿಕ್ಷಣ ಇಲಾಖೆ ಪ್ರಾಚಾರ್ಯರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ರಾಮಸೇನೆ ಹಾಗೂ ಬಹುಜನ ಅಂಬೇಡ್ಕರ್ ಸೇನೆ ಕಾರ್ಯಕರ್ತರು ಪ್ರಾಚಾರ್ಯರ ವಿರುದ್ಧ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
ದೂರುದಾರರ ಅರ್ಜಿ ಸ್ವೀಕರಿಸಿರುವ ಪೊಲೀಸರು, ಶಿಕ್ಷಣ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳದೇ ಹೋಗಿದ್ದರೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗುವುದು. ಆ ಬಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಮಾತನಾಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯ ಎರಡೂ ಸಂಘಟನೆಯವರು ಪ್ರಾಚಾರ್ಯ ಪಾಟೀಲ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
Kshetra Samachara
16/11/2021 09:52 pm