ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಸಾವಿನ ಹಿಂದೆ ಹಲವು ಅನುಮಾನಗಳಿವೆ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅನುಮಾನ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹಿಳಾ ಸಿಬ್ಬಂದಿ ಬಾಗಲಕೋಟೆಗೆ ಹೋಗುವುದಾಗಿ ಹೇಳಿದ್ದರು. ಆದರೆ ಗೋವಾಕ್ಕೆ ಹೋಗಿದ್ದ ಅವರು, ಬರುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಕುಲಪತಿ ಡಾ. ಎಂ.ಬಿ.ಚಟ್ಟಿ ಅವರ ಆಪ್ತ ಸಹಾಯಕ ಮುಲ್ಲಾ ಶಾಮೀಲಾಗಿದ್ದಾರೆ. ಮುಲ್ಲಾ ಈ ಮಹಿಳಾ ಸಿಬ್ಬಂದಿಯನ್ನು ಕಾರವಾರಕ್ಕೆ ಅಂತ ಹೇಳಿ ಗೋವಾಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ವಿವಿಯ ಯಾವ ಕೆಲಸ ಕಾರ್ಯಗಳು ಇರಲಿಲ್ಲ. ಅದರ ಹಿಂದೆಯೂ ಈ ಮಹಿಳಾ ಸಿಬ್ಬಂದಿಯನ್ನು ಮಹಾರಾಷ್ಟ್ರದ ಎರಡು ಧಾರ್ಮಿಕ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದ್ದರು. ಅವರನ್ನು ನೌಕರಿಯಿಂದ ಕೈ ಬಿಡುವುದಾಗಿ ಹೆದರಿಸಿ, ಬೆದರಿಸಿದ್ದಾರೆ. ಅದರ ವಾಟ್ಸಪ್ ಸಂದೇಶಗಳು ಕೂಡ ನಮ್ಮ ಬಳಿ ಇವೆ. ಹೀಗಾಗಿ ಇದರ ಹಿಂದೆ ಹಲವು ಅನುಮಾನಗಳಿದ್ದು, ಅದರ ಕುರಿತು ಸಮಗ್ರ ತನಿಖೆಯಾಗಬೇಕು. ತಕ್ಷಣವೇ ಮುಲ್ಲಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು. ಈ ಬಗ್ಗೆ ಅವರ ಪೋಷಕರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈವರೆಗೆ ಈ ಬಗ್ಗೆ ಮೌನ ಮುರಿಯಬೇಕಾದ ಕುಲಪತಿ ಡಾ. ಮಹಾದೇವ ಚಟ್ಟಿ ಅವರು ಸುಮ್ಮನೇ ಕುಳಿತಿರುವುದನ್ನು ನೋಡಿದರೆ ಅವರ ಪಾತ್ರದ ಬಗ್ಗೆ ಕೂಡ ನಮಗೆ ಅನುಮಾನ ಬರುತ್ತಿದೆ. ಚಟ್ಟಿ ಕೂಡ ಆ ದಿನ ಗೋವಾ, ಕರಾವಳಿ ಭಾಗದಲ್ಲಿಯೇ ಪ್ರವಾಸದಲ್ಲಿದ್ದರು ಎಂಬ ಮಾಹಿತಿ ಇದೆ. ಅವರನ್ನು ತಕ್ಷಣವೇ ರಜೆ ಮೇಲೆ ಕಳುಹಿಸಿ ಪ್ರಕರಣದ ತನಿಖೆಯನ್ನು ನಡೆಸಲು ಸತ್ಯ ಶೋಧನಾ ಸಮಿತಿ ರಚಿಸಬೇಕು. ಆಗ ಎಲ್ಲಾ ಸತ್ಯಾಂಶ ಹೊರಬೀಳಲಿದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ. ಪಾಟೀಲ, ರಾಜ್ಯ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅನುದಾನ ದುರ್ಬಳಕೆ ಕುರಿತೂ ಉನ್ನತಮಟ್ಟದ ತನಿಖೆ ನಡೆಸಬೇಕು. ದೇಶದ ಪ್ರತಿಷ್ಟಿತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಇತ್ತೀಚಿನ ದಿನಗಳಲ್ಲಿ ಅವ್ಯವಹಾರ, ಅಕ್ರಮ ಗೊಂದಲಗಳಿಗೆ ಸಿಲುಕಿ ಸುದ್ದಿಯಾಗುತ್ತಿರುವುದು ವಿಪರ್ಯಾಸದ ಸಂಗತಿ. ಐಡಿಪಿ ಯೋಜನೆಗೆ ಕೇಂದ್ರ ಸರ್ಕಾರ 25 ಕೋಟಿ ಮೊತ್ತ ಮೀಸಲಿಟ್ಟಿದೆ. ಅದರಲ್ಲಿ ಈವರೆಗೆ ವಿಶ್ವವಿದ್ಯಾಲಯಕ್ಕೆ 6.6 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ವಿಶ್ವಬ್ಯಾಂಕ್ ನಿಂದ ಸಾಲ ಪಡೆದು ಕೇಂದ್ರ ಸರ್ಕಾರ ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿದೆ. ಆದರೆ ಹಣ ಸದುಪಯೋಗವಾಗುವ ಬದಲಿಗೆ ದುರುಪಯೋಗವಾಗಿರುವುದು ವಿಶ್ವವಿದ್ಯಾಲಯದ ದಾಖಲೆಗಳಲ್ಲಿಯೇ ಕಂಡು ಬಂದಿದೆ. ಹೀಗಾಗಿ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಪಣ ದುರುಪಯೋಗವಾಗಿದ್ದರಿಂದ ಈ ಅವ್ಯವಹಾರದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
Kshetra Samachara
26/02/2021 12:28 pm