ಧಾರವಾಡ: ಧಾರವಾಡದ ಅರಣ್ಯ ಇಲಾಖೆ ಸಿಬ್ಬಂದಿ ಬರೊಬ್ಬರಿ 370 ಕೆಜಿ ಶ್ರೀಗಂಧದ ಕಟ್ಟಿಗೆಗಳನ್ನು ವಶಪಡಿಸಿಕೊಂಡು ಐದು ಜನ ಚಂದನ ಚೋರರ ಹೆಡೆಮುರಿ ಕಟ್ಟಿದ್ದಾರೆ.
ಶೀಗಿಗಟ್ಟಿ ತಾಂಡಾದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರು ಕಡೆಗೆ ಹೊರಟಿದ್ದ ಟಾಟಾ 207 ಗೂಡ್ಸ್ ಹಾಗೂ ಶಿಫ್ಟ್ ವಾಹನದಲ್ಲಿ ಈ ಶ್ರೀಗಂಧದ ಕಟ್ಟಿಗೆಗಳನ್ನು ಸಾಗಿಸಲಾಗುತ್ತಿತ್ತು. ಈ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಈ ವಾಹನಗಳನ್ನು ಬೆನ್ನಟ್ಟಿ ಐವರು ಆರೋಪಿಗಳು, 370 ಕೆಜಿ ಶ್ರೀಗಂಧ ಹಾಗೂ ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಚಂದನ ಚೋರರು ಮಧ್ಯವರ್ತಿಗಳಾಗಿದ್ದು, ಧಾರವಾಡದ ವಿವಿಧ ಭಾಗಗಳಲ್ಲಿನ ಶ್ರಿಗಂಧವನ್ನು ಕಳ್ಳತನ ಮಾಡಿ 400-500 ಕೆಜಿ ಆದ ಮೇಲೆ ಒಮ್ಮೆಲೆ ಆ ಗಂಧದ ಕಟ್ಟಿಗೆಗಳನ್ನು ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದರು.
ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ಕಲೆ ಹಾಕುತ್ತಿದ್ರಂತೆ. ನಿನ್ನೆ ಮಧ್ಯರಾತ್ರಿ ಖಚಿತ ಮಾಹಿತಿ ಮೇರೆಗೆ ರಾಣೆಬೆನ್ನೂರುವರೆಗೂ ಈ ವಾಹನಗಳನ್ನು ಬೆನ್ನಟ್ಟಿದ ಸಿಬ್ಬಂದಿ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದಾರೆ.
ರಾಯಭಾಗ ತಾಲೂಕಿನ ಕನದಾಳ ಗ್ರಾಮದ ಪರಸಪ್ಪ ಭಜಂತ್ರಿ, ಮಾರುತಿ ಭಜಂತ್ರಿ, ಕಲ್ಲಪ್ಪ ಶಿಂಧೆ, ಮಹಾದೇವ ಮಾಂಗ ಹಾಗೂ ರಾಜು ಭಜಂತ್ರಿ ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಕಳೆದ ಹಲವು ದಿನಗಳಿಂದ ಈ ಶ್ರೀಗಂಧ ರವಾನೆ ಮಾಡುವ ಕೆಲಸ ಮಾಡುತ್ತಿದ್ದರು. ರೇಂಜ್ ಆಫೀಸರ್ ಆರ್.ಎಸ್. ಉಪ್ಪಾರ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ಮಾಡಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.
Kshetra Samachara
07/01/2021 04:38 pm