ಧಾರವಾಡ: ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಜಿಲೆಟಿನ್ ಹಾಗೂ ಇತರ ಸ್ಫೋಟಕ ವಸ್ತುಗಳು ಸೇರಿದಂತೆ ಓರ್ವ ಆರೋಪಿಯನ್ನು ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಹುಬ್ಬಳ್ಳಿ-ಧಾರವಾಡ ಘಟಕದ ಅಧಿಕಾರಿಗಳು ಇತ್ತೀಚೆಗೆ ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಚವರಗುಡ್ಡ ಗ್ರಾಮದಲ್ಲಿರುವ ಮೋಹನ ವೆಂಕಣ್ಣ ಗಿರಡ್ಡಿ ಇವರಿಗೆ ಸೇರಿದ ಬಾಲಾಜಿ ಸ್ಟೋನ್ ಮತ್ತು ಕ್ರಷರ್ ಕ್ವಾರಿಗೆ ಮೋಟಾರ್ ಸೈಕಲ್‍ವೊಂದರ ಮೂಲಕ ಅಕ್ರಮವಾಗಿ ಜಿಲೆಟಿನ್ ಸ್ಫೋಟಕ ವಸ್ತುಗಳನ್ನು ಓರ್ವ ವ್ಯಕ್ತಿಯು ಹುಬ್ಬಳ್ಳಿ ಕಡೆಯಿಂದ ಸಾಗಿಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗಕ್ಕೆ ಕಳೆದ ಡಿಸೆಂಬರ್ 24 ರಂದು ಖಚಿತ ಮಾಹಿತಿ ದೊರೆಯಿತು.
ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗದ ಪೊಲೀಸರು, ಸ್ಥಳೀಯ ಪಂಚರೊಂದಿಗೆ ತೆರಳಿ ಆರೋಪಿ ಪತ್ತೆ ಮಾಡಲು ಕಾರ್ಯಾಚರಣೆ ಕೈಗೊಂಡರು. ಆರೋಪಿಯಾಗಿರುವ ಅಣ್ಣಿಗೇರಿ ತಾಲೂಕ ಹಳ್ಳಿಕೇರಿಯ ಹನುಮಂತಗೌಡ ವೀರನಗೌಡ ಪಾಟೀಲ ಹಾಗೂ ಅವನ ಬಳಿಯಿದ್ದ 41 ಜಿಲೆಟಿನ್ ಕಡ್ಡಿಗಳು, 23 ಎಲೆಕ್ಟ್ರಾನಿಕ್ ಡಿವೈಸ್‍ಗಳು, ಒಂದು ಸ್ಪ್ಲೆಂಡರ್ ಪ್ಲಸ್ ಬೈಕ್‍ನ್ನು ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಎಕ್ಸಪ್ಲೋಜಿವ್ ಆ್ಯಕ್ಟ 1884 ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆಂತರಿಕ ಭದ್ರತಾ ವಿಭಾಗದ ಎ.ಎಸ್.ಐ. ಎಸ್.ಎಂ. ಹೊಸಮನಿ, ಸಿಬ್ಬಂದಿ ವರ್ಗದ ಎ.ಎ. ಮಿರ್ಜಿ. ವಿ.ಬಿ.ಮಾಯಣ್ಣವರ ಅವರು ನಡೆಸಿದ ಈ ದಾಳಿಯನ್ನು ಆಂತರಿಕ ಭದ್ರತಾ ವಿಭಾಗದ ಬೆಳಗಾವಿ ವಲಯದ ಡಿವೈಎಸ್‍ಪಿ ಅನಿಲಕುಮಾರ್ ಎಸ್ ಭೂಮರಡ್ಡಿ ಶ್ಲಾಘಿಸಿದ್ದಾರೆ.
Kshetra Samachara
02/01/2021 08:10 pm