ಧಾರವಾಡ: ಮಾರಾಟ ಮಾಡುವ ಉದ್ದೇಶದಿಂದ ತನ್ನ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ, ಆರೋಪಿತನಿಗೆ ಧಾರವಾಡದ ಪ್ರಧಾನ ಹಾಗೂ ಸತ್ರ ನ್ಯಾಯಾಲಯ 5 ವರ್ಷ ಕಠಿಣ ಶಿಕ್ಷೆಯ ಜೊತೆಗೆ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ಪಂಚಾಕ್ಷರಯ್ಯ ಅಡವಯ್ಯನವರ ಎಂಬಾತ ತನ್ನ ಶೇತ್ಕಿ ಜಮೀನಿನಲ್ಲಿ ಮಾರಾಟ ಮಾಡುವ ಉದ್ದೇಶದಿಂದ 186 ಗಾಂಜಾ ಗಿಡಗಳನ್ನು ಬೆಳೆದಿದ್ದ.
ಗುಡಗೇರಿ ಠಾಣೆ ಪೊಲೀಸರು ದಾಳಿ ಮಾಡಿ ಒಣಗಿದ 3 ಕೆಜಿ 500 ಗ್ರಾಂ ಗಾಂಜಾ ಸೇರಿದಂತೆ ಒಟ್ಟು 1.80 ಲಕ್ಷ ಮೌಲ್ಯದ 31 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ನವೆಂಬರ್ 4ರ 2019ರಂದು ಈ ಪ್ರಕರಣ ನಡೆದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎನ್‌ಡಿಪಿಎಸ್ ಕಾಯ್ದೆ ಕಲಂ 20 (ಎ),(i) ರ ಅಡಿ 5 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದೆ. ದಂಡ ಕಟ್ಟದಿದ್ದರೆ ಮತ್ತೆ 6 ತಿಂಗಳು ಕಠಿಣ ಶಿಕ್ಷೆ ವಿಧಿಸಿದೆ.
ಇದಲ್ಲದೇ ಕಲಂ 22 (ಬಿ), (ii) (ಬಿ) ಅಡಿ 5 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ಹಾಗೂ ತಂಡ ತುಂಬಲು ತಪ್ಪಿದ್ದಲ್ಲಿ ಮತ್ತೆ 6 ತಿಂಗಳು ಕಠಿಣ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಬಿ.ವಿ.ಪಾಟೀಲ ವಾದ ಮಂಡಿಸಿದ್ದರು.
Kshetra Samachara
13/10/2022 07:26 pm