ಹುಬ್ಬಳ್ಳಿ: ರಾಯನಾಳ ಗ್ರಾಪಂ ಸದಸ್ಯ ದೀಪಕ ಪಟದಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಐಡಿ ತನಿಖಾಧಿಕಾರಿಗಳು ನಗರದ 4ನೇ ಕಿರಿಯ ದಿವಾಣಿ ನ್ಯಾಯಾಲಯದಲ್ಲಿ ಹತ್ತು ಜನರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧಿತರಾದ ಪ್ರವೀಣ ಮುಲ್ದಿಂಗನವರ, ಮಲ್ಲಿಕಾರ್ಜುನ ಮೇಟಿ, ಶಿವಪ್ಪ ಮೇಟಿ, ಯಲ್ಲಪ್ಪ ಬಿ. ಮೇಟಿ, ಪ್ರಕಾಶ ಮೇಟಿ, ಉಳವೇಶ ಮೇಟಿ, ಚಂದ್ರಶೇಖರ ಮುಲ್ದಿಂಗನವರ, ಬಸವರಾಜ ಮಾರಡಗಿ ಹಾಗೂ ಹಾಗೂ ಯಲ್ಲಪ್ಪ ಆರ್. ಮೇಟಿ, ರುದ್ರಪ್ಪ ಮೇಟಿ ವಿರುದ್ಧ ನ್ಯಾಯಾಲಯದಲ್ಲಿ ಅ. 3ರಂದು 350ಕ್ಕೂ ಹೆಚ್ಚು ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ಗಂಗಿವಾಳ ಗ್ರಾಮದ ದೀಪಕ ಅವರನ್ನು 10ಕ್ಕೂ ಹೆಚ್ಚು ಜನರ ಗುಂಪು ಜುಲೈ 4ರಂದು ರಾತ್ರಿ ರಾಯನಾಳ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಪೊಲೀಸರು ಮೊದಲಿಗೆ ಆರು ಜನರನ್ನು ಬಂಧಿಸಿದ್ದರು. ನಂತರ ಇಬ್ಬರನ್ನು ಸೇರಿ ಎಂಟು ಜನರನ್ನು ಬಂಧಿಸಿದ್ದರು.
ದೀಪಕ ಹತ್ಯೆಯಲ್ಲಿ ಇನ್ನು ಮೂವರು ಪ್ರಮುಖ ಕಾರಣರಾಗಿದ್ದಾರೆ. ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಮೃತನ ಪತ್ನಿ ಪುಷ್ಪಾ ಪಟದಾರಿ ಹಾಗೂ ಸಹೋದರ ಸಂಜಯ ಪಟದಾರಿ ಮತ್ತು ಕುಟುಂಬಸ್ಥರು ಹಳೇಹುಬ್ಬಳ್ಳಿ ಠಾಣೆ ಎದುರು ಪ್ರತಿಭಟಿಸಿದ್ದರು. ಅಷ್ಟೇ ಅಲ್ಲದೆ ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಸಿಎಂ ಮತ್ತು ಡಿಐಜಿ ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದರು.
ರಾಜ್ಯ ಸರಕಾರ ಈ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು. ಸಿಐಡಿ ಅಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸುತ್ತಿರುವಾಗಲೇ ಸೆಪ್ಟೆಂಬರ್ 24 ರಂದು ರಾತ್ರಿ ಪುಷ್ಪಾ ಪಟದಾರಿ ನವನಗರದ ಸಿಟಿ ಪಾರ್ಕ್‌ನ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಯಲ್ಲಪ್ಪ ಆರ್. ಮೇಟಿ ಮತ್ತು ರುದ್ರಪ್ಪ ಮೇಟಿ ತಲೆಮರೆಸಿಕೊಂಡಿದ್ದರು. ಅವರನ್ನು ಅ. 7 ರಂದು ಮುಧೋಳದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ದೀಪಕ ಹತ್ಯೆ ಪ್ರಕರಣದಲ್ಲಿ ನಾಗರಾಜ ಹೆಗಣ್ಣವರ ಎಂಬಾತ ಭಾಗಿಯಾಗಿದ್ದಾನೆಂದು ಸಂಜಯ ಪಟದಾರಿ ದೂರು ಸಲ್ಲಿಸಿದ್ದು, ಆತ ಇದುವರೆಗೂ ತಲೆಮರೆಸಿಕೊಂಡಿದ್ದಾನೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/10/2022 03:35 pm