ಹುಬ್ಬಳ್ಳಿ: ಸರಳವಾಸ್ತು ಮೂಲಕ ದೊಡ್ಡ ಸಾಮ್ರಾಜ್ಯವನ್ನೇ ನಿರ್ಮಿಸಿ, ಹಾಡಹಗಲೇ ತನ್ನ ಮಾಜಿ ಸಹೋದ್ಯೋಗಿಗಳಿಂದ ಹತ್ಯೆಯಾದ ಚಂದ್ರಶೇಖರ ಗುರೂಜಿ ಸಾವಿನ ಬಗ್ಗೆ ಸುದೀರ್ಘ ತನಿಖೆ ನಡೆಸಿದ, ಪೊಲೀಸರು ಬರೊಬ್ಬರಿ 840 ಪುಟಗಳ ಜಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿದ್ದು, ನೂರಾರು ದಾಖಲೆಗಳು ಇದರೊಂದಿಗೆ ಲಗತ್ತಾಗಿವೆ.
ಬೇನಾಮಿ ಆಸ್ತಿ ಮಾರಾಟ, ವೈಮನಸ್ಸು, ನಿರ್ಲಕ್ಷ್ಯ ಧೋರಣೆ ಗುರೂಜಿ ಹತ್ಯೆಗೆ ಪ್ರಮುಖ ಕಾರಣ. ಹಲವಾರು ಕುತೂಹಲಕಾರಿ ಅಂಶಗಳು ಚಾರ್ಜ್ ಶೀಟ್‌ನಲ್ಲಿ ಬೆಳಕಿಗೆ ಬಂದಿದ್ದು, ಇಷ್ಟು ದಿನ ಮಹಾಂತೇಶ್ ಮತ್ತು ಮಂಜುನಾಥ ಗುರೂಜಿ ಬೇನಾಮಿ ಎಂದು ತಿಳಿದಿದ್ದ ಅಂಶ ಸುಳ್ಳಾಗಿದ್ದು, ಗುರೂಜಿ ಮತ್ತೊಬ್ಬ ಬೇನಾಮಿ ಮತ್ತು ಸರಳವಾಸ್ತು ಹಳೇ ನೌಕರ ಬಸವರೆಡ್ಡಿ ಚೌಡರೆಡ್ಡಿ ಎಂಬ ಸತ್ಯ ಬಯಲಿಗೆ ಬಂದಿದೆ.
ಇನ್ನೂ ಬಸವರೆಡ್ಡಿ ಹೆಸರಿನಲ್ಲಿ ಗೋಕುಲ ರಸ್ತೆಯಲ್ಲಿರುವ ಸರ್ವೆ ನಂಬರ್ 116/1 ,5. 11 ಗುಂಟೆ ಜಮೀನನ್ನು ಗುರೂಜಿ ಬೇನಾಮಿ ಆಸ್ತಿ ಇರುವುದನ್ನು ತಿಳಿದಿದ್ದ ಈ ಇಬ್ಬರು, ಬಸವರೆಡ್ಡಿಯನ್ನು ಪುಲಾಯಿಸಿ ಆತನಿಂದ ತಮ್ಮ ಹೆಸರಿಗೆ ಜಮೀನನ್ನು ವರ್ಗಾಯಿಸಿಕೊಂಡು ಅದನ್ನು ಮಾರಿ, ಬಳಿಕ ಬಂದ ಹಣದಲ್ಲಿ ಮೂವರು ಸಮನಾಗಿ ಹಂಚಿಕೊಳ್ಳಲು ನಿರ್ಧಾರ ಮಾಡಿದ್ದರು. ಈ ಸುದ್ದಿ ತಿಳಿದ ಗುರೂಜಿ ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಒಂದಲ್ಲ ಒಂದು ರೀತಿಯಲ್ಲಿ ಗುರೂಜಿ ಮಹಾಂತೇಶ್ ಮತ್ತು ಮಂಜುನಾಥನಿಗೆ ತೊಂದರೆ ನೀಡುತ್ತಿರುವುದರಿಂದ ಬಹಳಷ್ಟು ರೋಸಿದ್ದ ಹಂತಕರು ಗುರೂಜಿಯನ್ನು ಮುಗಿಸಲು ಯೋಚನೆ ಮಾಡಿದ್ದಾರೆ. ಜುಲೈ 1ರಂದು ತಮ್ಮ ಮೊಮ್ಮಗನ ಅಂತ್ಯಸಂಸ್ಕಾರಕ್ಕೆ ಗುರೂಜಿ ಹುಬ್ಬಳ್ಳಿಗೆ ಬಂದಿರುವುದನ್ನು ಅರಿತ ಆರೋಪಿಗಳು, ಗುರೂಜಿಯನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಆಗ ಗುರೂಜಿ ಇದು ಸೂಕ್ತ ಸಮಯವಲ್ಲ ಅಂತ ಹೇಳಿದ್ದಾರೆ. ಇದಾದ ಬಳಿಕ ಮನೆ ಬಿಟ್ಟ ಆರೋಪಿಗಳು ಖಾಸಗಿ ಹೋಟೆಲ್‌ನಲ್ಲಿ ರೂಮ್ ಮಾಡಿ ಕೊಲೆಗೆ ಸ್ಕೆಚ್ ಹಾಕಲು ಆರಂಭಿಸಿದ್ದಾರೆ. ಜುಲೈ4 ರಂದು ಗುರೂಜಿ ಉಳಿದಕೊಂಡಿದ್ದ ಪ್ರೆಸಿಡೆಂಟ್ ಹೋಟೆಲ್‌ಗೆ ತೆರಳಿದ ಆರೋಪಿಗಳು ತಮ್ಮ ಕಷ್ಟಗಳನ್ನೆಲ್ಲಾ ಹೇಳಿಕೊಂಡಿದ್ದಾರೆ. ಅಲ್ಲದೆ ತಮಗೆ ಕಂಪನಿಯಿಂದ ಬರಬೇಕಾದ ಬಾಕಿ ಹಣ ಮತ್ತು ಅಪಾರ್ಟ್ಮೆಂಟ್‌ನಲ್ಲಿ ಸೌಲಭ್ಯ ಸರಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಗುರೂಜಿ ಇವರ ಮಾತಿಗೆ ತಲೆ ಕೆಡಿಸಿಕೊಂಡಿಲ್ಲ. ಇದರಿಂದಾಗಿ ಮಾನಸಿಕವಾಗಿ ನೊಂದ ಆರೋಪಿಗಳು ಮತ್ತೆ ಮರುದಿನ ಬೆಳಿಗ್ಗೆ ಹೋಟೆಲ್‌ಗೆ ಬಂದು ಗುರೂಜಿಗೆ ಕರೆ ಮಾಡಿದ್ದಾರೆ. ನಿಮಗೆ ದಾಖಲೆಗಳನ್ನು ತಂದು ಒಪ್ಪಿಸುತ್ತೇವೆ ಅಂತ ಮತ್ತೆ ಭೇಟಿಗೆ ಅವಕಾಶ ಕೇಳಿದ್ದಾರೆ. ಇದಕ್ಕೆ ಗುರೂಜಿ ಸಹ ಸಮ್ಮತಿ ನೀಡಿದ್ದಾರೆ. ಅದರಂತೆ ಜುಲೈ5 ರಂದು ದಾಖಲೆಗಳಲ್ಲಿ ಎರಡು ಚಾಕುಗಳನ್ನು ತೆಗೆದುಕೊಂಡು ಹೋಗಿ ಗುರೂಜಿ ಹತ್ಯೆ ಮಾಡಿರುವ ಬಗ್ಗೆ ಸ್ವತಃ ಆರೋಪಿಗಳೇ ಸತ್ಯ ಒಪ್ಪಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/10/2022 02:16 pm