ಧಾರವಾಡ: ಆ ಒಂದು ತಂಡ ಧಾರವಾಡ ಜಿಲ್ಲೆಯಲ್ಲಿ ದಂಡು ಪಾಳ್ಯದ ರೀತಿಯಲ್ಲಿ ಮರ್ಡರ್ ಮಾಡಿ ಮಹಿಳೆಯರ ಮೈಮೇಲಿನ ಚಿನ್ನಾಭರಣ ದೋಚುತ್ತಿತ್ತು. ಧಾರವಾಡ ಜಿಲ್ಲೆಯಲ್ಲಿ ನಡೆದಿದ್ದ ಎರಡು ಕೊಲೆ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿದ್ದವು. ಈ ಕೊಲೆ ಪ್ರಕರಣ ಬೇಧಿಸಲು ಹಾಗೂ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಹೇಗೆ ತಂತ್ರ ರೂಪಿಸಿದ್ರು ಗೊತ್ತಾ? ಬನ್ನಿ ಹೇಳ್ತೀವಿ ಈ ಮರ್ಡರ್ ಕಹಾನಿಯನ್ನು...
ಕಲಘಟಗಿ-ಹುಬ್ಬಳ್ಳಿ ರಸ್ತೆಯಲ್ಲಿ ಇತ್ತೀಚೆಗೆ ಮಹಿಳೆಯರಿಬ್ಬರ ಶವ ಪತ್ತೆಯಾಗಿದ್ದವು. ಅವು ಕೂಡ ಅರೆಬೆಂದ ಸ್ಥಿತಿಯಲ್ಲಿದ್ದವು. ಮೇ 11 ರಂದು ಕಲಘಟಗಿ ಹುಬ್ಬಳ್ಳಿ ರಸ್ತೆಯ ಎನ್‌ಎಚ್ 63 ರಸ್ತೆ ಕಾಡನಕೊಪ್ಪ ಗ್ರಾಮದ ಹದ್ದಿನಲ್ಲಿ ಹುಬ್ಬಳ್ಳಿ ಈಶ್ವರನಗರದ ಇಂದಿರಾಬಾಯಿ ಪವಾರ್ (75) ಎಂಬ ವೃದ್ಧೆಯ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಕಲಘಟಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದಾದ ಬಳಿಕ ಜುಲೈ 2 ರಂದು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಮತ್ತೊಂದು ಮಹಿಳೆಯ ಶವ ಪತ್ತೆಯಾಗಿತ್ತು. ಅದು ಕೂಡ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹುಬ್ಬಳ್ಳಿಯ ಈಶ್ವರನಗರದವರೇ ಆದ ಮಹಾದೇವಿ ನೀಲಣ್ಣವರ ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಸುಟ್ಟು ಹೋಗಿದ್ದರು. ಈ ಸಂಬಂಧ ಕೂಡ ಕಲಘಟಗಿ ಠಾಣೆ ಪೊಲೀಸರು ಮತ್ತೊಂದು ದೂರು ದಾಖಲಿಸಿದ್ದರು. ಈ ಹತ್ಯೆ ಪ್ರಕರಣ ಪೊಲೀಸರ ನಿದ್ದೆಗೆಡಿಸಿದ್ದವು. ಈ ಪ್ರಕರಣವನ್ನು ಬೇಧಿಸಲೇಬೇಕು ಎಂದು ಪೊಲೀಸರು ನಿರ್ಧಾರ ಕೈಗೊಂಡು ಇದೀಗ ಆರು ಜನರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಪೊಲೀಸರು ಹುಬ್ಬಳ್ಳಿ ಈಶ್ವರನಗರದಲ್ಲೇ ಎರಡು ತಿಂಗಳು ಮನೆ ಮಾಡಿ ಬಿಡಾರ ಹೂಡಿದ್ದರು. ಈಶ್ವರನಗರದ ಜನತೆಯಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಅನೇಕ ಸಿಸಿ ಟಿವಿ ಕ್ಯಾಮೆರಾ, ಶಂಕಿತ ವ್ಯಕ್ತಿ ಹಾಗೂ ವಾಹನ ಓಡಾಟ ಎಲ್ಲದರ ಮೇಲೂ ನಿಗಾ ವಹಿಸಿದ್ದರು. ಓರ್ವ ವ್ಯಕ್ತಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಶಂಕಿತ ವ್ಯಕ್ತಿ ಸೆರೆಯಾಗಿದ್ದನ್ನು ಕಂಡ ಪೊಲೀಸರು ಆತನನ್ನು ವಿಚಾರಿಸಿದಾಗ ಇಡೀ ದಂಡು ಪಾಳ್ಯದ ಕಹಾನಿ ಬಯಲಾಗಿದೆ.
ಮೇ 11 ರಂದು ಇಂದಿರಾಬಾಯಿ ಪವಾರ್ ಅವರ ಮನೆಗೆ ನೀರು ಕೇಳುವ ನೆಪದಲ್ಲಿ ಹೋದ ಆರೋಪಿಗಳು ಆ ವೃದ್ಧೆಯನ್ನು ಹತ್ಯೆ ಮಾಡಿ ಆಕೆಯ ಮೈಮೇಲಿದ್ದ ಒಡವೆಗಳನ್ನು ದೋಚಿ ನಂತರ ಯಾರಿಗೂ ಗೊತ್ತಾಗದಂತೆ ಆಕೆಯನ್ನು ಸುಟ್ಟು ಬಂದಿದ್ದರು. ಇದಾದ ಬಳಿಕ ಜುಲೈ 2 ರಂದು ದನ ಮೇಯಿಸಲೆಂದು ಹೋಗಿದ್ದ ಮಹಾದೇವಿ ನೀಲಣ್ಣವರ ಎಂಬಾಕೆಯನ್ನು ಹತ್ಯೆ ಮಾಡಿ, ಒಡವೆ ದೋಚಿ ಸುಟ್ಟು ಹಾಕಿದ್ದರು. ಈ ಎಲ್ಲ ಸತ್ಯವನ್ನು ಆ ಆರೋಪಿ ಬಾಯಿ ಬಿಟ್ಟಿದ್ದಲ್ಲದೇ ಹತ್ಯೆಯಲ್ಲಿ ಪಾಲ್ಗೊಂಡ ಇಡೀ ತಂಡದ ಸದಸ್ಯರ ಹೆಸರನ್ನೂ ಹೇಳಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಸೊರಬದ ದೇವರಾಜ ಮೊಗಲೆ, ಅದರಗುಂಚಿಯ ಕಾಳಪ್ಪ ರೋಗಣ್ಣವರ, ಅದರಗುಂಚಿಯ ಬಸವರಾಜ ವಾಳದ, ಮೊಹ್ಮದ್‌ರಫೀಕ್ ಬಡಿಗೇರ, ಬೆಳಗಲಿಯ ಶಿವಾನಂದ ಕೆಂಚಣ್ಣವರ ಹಾಗೂ ರೊಟ್ಟಿಗವಾಡದ ಗಂಗಪ್ಪ ಮರತಂಗಿ ಎಂಬುವವರೇ ಬಂಧಿತ ಆರೋಪಿಗಳು. ಇವರು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವರು. ಈ ರೀತಿ ಸಣ್ಣ ಪುಟ್ಟ ಕೆಲಸ ಮಾಡಿದರೆ ತಾವು ಶ್ರೀಮಂತರಾಗುವುದಿಲ್ಲ ಎಂದು ಈ ಕೃತ್ಯಕ್ಕೆ ಕೈ ಹಾಕಿದ್ದರು.
ಹತ್ಯೆಗೂ ಮುನ್ನ ತಮ್ಮ ಮೊಬೈಲ್‌ಗಳನ್ನು ಒಂದೆಡೆ ಇಟ್ಟು ಹೋಗ್ತಾ ಇದ್ರು. ಅಲ್ಲದೇ ಹತ್ಯೆ ಮಾಡಿದ ಸ್ಥಳದಲ್ಲಿ ಯಾವುದೇ ಸಾಕ್ಷಿ ಇಡದೇ ಎಲ್ಲವನ್ನೂ ನಾಶ ಮಾಡುತ್ತಿದ್ದರು. ಹತ್ಯೆ ಮಾಡುವ ಮುನ್ನ ಎಲ್ಲರೂ ಸೇರಿ ಮೋಜು ಮಸ್ತಿ ಮಾಡುತ್ತಿದ್ದರು ಎಂಬುದನ್ನು ಸ್ವತಃ ಆರೋಪಿಗಳೇ ಬಾಯಿ ಬಿಟ್ಟಿದ್ದಾರೆ. ಈ ತಂಡವನ್ನು ಪತ್ತೆ ಮಾಡಿದ ಎಲ್ಲಾ ಪೊಲೀಸರಿಗೆ ಎಸ್ಪಿ ಲೋಕೇಶ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಏನೇ ಆಗಲಿ, ಸಾಕಷ್ಟು ಶ್ರಮ ವಹಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಹೇಳಲೇಬೇಕಲ್ಲವೇ?
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/07/2022 08:33 pm