ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಕೋಮು ಗಲಭೆಯ ಘಟನೆ ಸಂಭವಿಸಿ ಹದಿನೇಳು ದಿನಗಳೇ ಕಳೆದಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಮತ್ತಷ್ಟು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ನಾವು ಬಚಾವ್ ಎಂದು ಕೊಂಡಿದ್ದವರು ಈಗ ಭಯಪಡುವಂತಾಗಿದೆ. ಹಾಗಿದ್ದರೇ ಇಲ್ಲಿದೆ ನೋಡಿ ಇನ್ವೆಸ್ಟಿಕೇಷನ್‌ನ ಇಂಟ್ರಸ್ಟಿಂಗ್ ಸ್ಟೋರಿ.
ಗಲಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನೆ ನೀಡಿದ ಹಲವರನ್ನು ಬಂಧಿಸಿದ್ದಾರೆ. ವಿವಿಧ ವಾಟ್ಸ್ ಅ್ಯಪ್ ಗ್ರೂಪ್‌ಗಳ ಮೂಲಕ ಕೆಲವರು ಪ್ರಚೋದನಾತ್ಮಕ ಅಡಿಯೋ, ಸಂದೇಶಗಳನ್ನು ರವಾನಿಸಿದ್ದರು. ಅವಹೇಳನಾಕಾರಿ ಸ್ಟೇಟಸ್ ಇಟ್ಟಿದ್ದ ಅಭಿಷೇಕ ಹಿರೇಮಠನ ವಿರುದ್ಧ ಕಿಡಿ ಕಾರಿದ್ದರು. 'ಠಾಣೆ ಬಳಿ ಅವನನ್ನು ಕರೆತಂದಿದ್ದಾರೆ. ಆತನನ್ನು ಮುಗಿಸಿ ಬಿಡೋಣ ಬನ್ನಿ' ಎಂದು ಕೆಲವರು ಚರ್ಚಿಸಿದ ಸಂದೇಶ ರವಾನಿಸಿದ್ದರು. ಅಭಿಷೇಕನ ಮೇಲಿನ ಆಕ್ರೋಶವನ್ನು ಭಿನ್ನ ಭಿನ್ನವಾಗಿ ಹೊರಹಾಕಿದ್ದರು. ಜನ ಸೇರಿಸಲು ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಬಳಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಹಾಗೂ ಐಟಿ ತಂತ್ರಜ್ಞರ ಸಹಾಯದಿಂದ ಇಂಥವರ ಪತ್ತೆಗಾಗಿ ಪೊಲೀಸರ ತಂಡ ಹಗಲಿರುಳು ಕೆಲಸ ಮಾಡುತ್ತಿದೆ. ಈಗಾಗಲೇ ಹತ್ತಕ್ಕೂ ಅಧಿಕ ವಾಟ್ಸ್ ಅಪ್' ಗ್ರೂಪ್ ಅಡ್ಮಿನ್‌ಗಳು, ಆಡಿಯೋ ಹಾಗೂ ಸಂದೇಶ ರವಾನಿಸಿದವರನ್ನೂ ಪತ್ತೆ ಹಚ್ಚಿರುವ ಪೊಲೀಸರು, ಅವರನ್ನೂ ಕಂಬಿ ಹಿಂದೆ ತಳ್ಳಿದ್ದಾರೆ. ಇನ್ನೂ ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪೊಲೀಸ್ ಠಾಣೆ ಎದುರು ಗಲಭೆಕೋರರು "ಅಭಿಷೇಕನನ್ನು ನಮಗೆ ಒಪ್ಪಿಸಿ" ಎಂದು ದಾಂಧಲೆ ಮಾಡಿದ್ದರು. ಪೊಲೀಸರ ವಿರುದ್ಧವೇ ದಂಗೆ ಎದ್ದಿದ್ದರು. ಆರಕ್ಷಕರ ಮೇಲೆ ದೊಡ್ಡ ದೊಡ್ಡ ಕಲ್ಲು ಎಸೆದು ಗಾಯಪಡಿಸಿದ್ದರು. ಸೈಜುಗಲ್ಲು ಎತ್ತಿ ಹಾಕಿ ಕೊಲೆಗೂ ಯತ್ನಿಸಿದ್ದರು. 7 ವಾಹನಗಳನ್ನು ಜಖಂಗೊಳಿಸಿದ್ದರು. ಈ ವೇಳೆ 12 ಪೊಲೀಸರು ಗಾಯಗೊಂಡಿದ್ದರು. ಒಬ್ಬೇ ಒಬ್ಬ ಗಲಭೆಕೋರನೂ ಅಂದು ಗಾಯಗೊಂಡಿರಲಿಲ್ಲ. ಹಾಗಾಗಿ, ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಸರ್ಕಾರದ ಗಮನಕ್ಕೆ ತಂದು ಹಲವು ಪ್ರಮುಖ ಗಲಭೆಕೋರರು ವಿರುದ್ಧ ರೌಡಿಶೀಟ್, ಕಮ್ಯುನಲ್ ಗೂಂಡಾ ಶೀಟ್ ತೆರೆಯಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಯಾರಿಗೂ ಕಾಣದಂತೆ ಮೊಬೈಲ್ ಬಳಕೆಯಿಂದಲೇ ಎಲ್ಲವನ್ನೂ ಕಂಟ್ರೋಲ್ ಮಾಡ್ತಿನಿ ಎಂದುಕೊಂಡಿದ್ದವರಿಗೆ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದೆ. ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಯಾರೇ ಇದ್ದರೂ ಹೆಡೆಮುರಿ ಕಟ್ಟುವುದಂತೂ ಖಂಡಿತ ಎಂಬುವಂತ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿದೆ.
Kshetra Samachara
02/05/2022 03:51 pm