ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸಿಎ ಸೈಟ್ ನುಂಗಿ...ಅಕ್ರಮ ಕಟ್ಟಡ ಕಟ್ಟಿ ಕೇಳುವವರಿಲ್ಲ..ಏಕೆಂದರೆ ಇದು ನಮ್ಮ HDMC

ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ

ಹುಬ್ಬಳ್ಳಿ : ಮಹಾನಗರ ಪಾಲಿಕೆ ಎಂದರೆ ಮಹಾ ಭ್ರಷ್ಟಾಚಾರದ ಕೂಪ. ಎಷ್ಟೇ ಖಡಕ್, ಪ್ರಾಮಾಣಿಕ ಕಮಿಶ್ನರ್ ಬಂದರೂ ಕಮಿಶನ್ ತಿನ್ನುವ, ಎಂಜಲು ದುಡ್ಡಿಗೆ ಕೈಚಾಚುವ ಕೆಲವು ಅಧಿಕಾರಿಗಳಿಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.

ಸಾರಿ ಕಮಿಶ್ನರ್ ಸುರೇಶ ಇಟ್ನಾಳ ಅವರೆ, ನೀವು ಅವಳಿ ನಗರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರಬಹುದು. ಅದರೆ ಕೆಲವು ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕುವವರೆಗೆ ಮಹಾನಗರದ ಉದ್ಧಾರ ಸಾಧ್ಯವಿಲ್ಲ. ಅದರಲ್ಲೂ ಪಾಲಿಕೆ ಕಟ್ಟಡ ಪರವಾನಿಗೆ ವಿಭಾಗವಂತೂ ಭ್ರಷ್ಟಾಚಾರದ ಎಪಿಕ್ ಸೆಂಟರ್.

ಸಬ್ ರಜಿಸ್ಟ್ರಾರ್ ಕಚೇರಿ ಲಂಚಾವತಾರದ ಬ್ರಹ್ಮಾಂಡವಾದರೆ ಕಟ್ಟಡ ಪರವಾನಿಗೆ ನೀಡುವ ವಿಭಾಗ ಅದರ ಸಹೋದರ. ಇತ್ತೀಚೆಗೆ ಅಲ್ಲಲ್ಲಿ ಆರಂಭವಾಗಿರುವ ವಲಯ ಕಚೇರಿಗಳೂ ಇದರಿಂದ ಹೊರತಾಗಿಲ್ಲ.

ಪಾಲಿಕೆ ಹಾಗೂ ಹುಡಾಕ್ಕೆ ಸೇರಿದ ಸಿಎ ಸೈಟುಗಳನ್ನು ನುಂಗಿ ನೀರು ಕುಡಿದರೂ ಕೇಳುವವರಿಲ್ಲ. ಮೇನ್ ರೋಡಿಗೆ ಹೊಂದಿಕೊಂಡಿರುವ ಸಿಎ ಸೈಟುಗಳಲ್ಲಿ ಅಕ್ರಮ ನಿರ್ಮಾಣ ನಡೆದರೂ ಪಾಪ ವಲಯ ಅಧಿಕಾರಿಗಳಿಗೆ ಕಾಣುತ್ತಿಲ್ಲವಂತೆ.

ಇನ್ನು ಅಪಾರ್ಟಮೆಂಟ್ ಹಾಗೂ ಕಮರ್ಷಿಯಲ್ ಕಾಂಪ್ಲೆಕ್ಸ್ ಗಳಲ್ಲಿಯ ಪಾರ್ಕಿಂಗ್ ಸ್ಪೇಸ್ ಅಂಗಡಿಗಳಾಗಿ, ಜಿಮ್ ಗಳಾಗಿ ರಾರಾಜಿಸುತ್ತಿವೆ. ಕುಸುಗಲ್ ರಸ್ತೆ ನವೀನ್ ಪಾರ್ಕ್ ದಲ್ಲಿಯ ಸಿಎ ಸೈಟಿನಲ್ಲಿ ಅಕ್ರಮವಾಗಿ ಇಂಡೋರ್ ಸ್ಟೇಡಿಯಂ ನಿರ್ಮಿಸಲಾಗುತ್ತಿತ್ತು. ಮಾಜಿ ಸಚಿವ ಬಸವರಾಜ್ ಹೊರಟ್ಟಿ ಅವರ ಪುತ್ರ ವಸಂತ ಹೊರಟ್ಟಿ ಹಾಗೂ ಕೆಲವು ಸ್ಥಳೀಯರು ಸಿಡಿದೆದ್ದಿರಿಂದ ಅದಕ್ಕೆ ಕಡಿವಾಣ ಬಿತ್ತು.

ಇನ್ನೂ ಕಾನೂನು, ನಿಯಮಾವಳಿ ಉಲ್ಲಂಘಿಸಿ ಅವಳಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ಸಾವಿರಾರು. ಅನಧಿಕೃತ ಕಟ್ಟಡಗಳು ಹಾಗೂ ನಿಯಮ ಉಲ್ಲಂಘಿಸಿ ಮೂರು ನಾಲ್ಕು ಮಹಡಿ ನಿರ್ಮಾಣವಾಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮೌನಕ್ಕೆ ಶರಣು ಹೋಗುತ್ತಿರುವುದು ಉದ್ದೇಶ ಎಲ್ಲರಿಗೂ ಗೊತ್ತು.

ಈಗ ಹುಬ್ಬಳ್ಳಿ ದಾಜೀಬಾನಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಐದಂತಸ್ತಿನ ಅಕ್ರಮ ಕಟ್ಟಡ ಇದಕ್ಕೆ ತಾಜಾ ಉದಾಹರಣೆ. ಪ್ರಮುಖ ಸಿಲ್ಕ್ ಅಂಗಡಿಯೊಂದರ ಮಾಲಿಕರು, ಮೂಲ ಮಾಲಿಕರಿಂದ ಖರೀದಿಸಿದ್ದು ಕೇವಲ 3000 ಚದರಡಿ. ಆದರೆ ಅಲ್ಲಿ 13000 ಚದರಡಿಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆಯಂತೆ.

ಕೋಠಾರಿ ಎಂಬವರು ನಿರ್ಮಿಸುತ್ತಿರುವ ಈ ಅಕ್ರಮ ಕಟ್ಟಡ ಅಕ್ಕಪಕ್ಕದ ಕಟ್ಟಡ ಮಾಲಿಕರಲ್ಲಿ ಭಯಹುಟ್ಟಿಸಿದೆ. ಈಗಲೇ ಅಕ್ಕಪಕ್ಕದ ಅಂಗಡಿಗಳಲ್ಲಿ ಭಾರಿ ನೀರು ಸೋರುತ್ತಿರುವುದು ಆತಂಕ ಸೃಷ್ಟಿಸಿದೆ. ಪಾಲಿಕೆ ಹಾಗೂ ಕಟ್ಟಡ ಮಾಲಿಕರ ವಿರುದ್ಧ ಸಿಡಿದೆದ್ದಿರುವ ಇನ್ನುಳಿದ ವ್ಯಾಪಾರಸ್ಥರು ತಕ್ಷಣ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಬೇಕು ಹಾಗೂ ಇದಕ್ಕೆ ಅನುಮತಿ ನೀಡಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸ್ವಾಮಿ ಧಾರವಾಡದಲ್ಲಿ ಸಂಭವಿಸಿದ ಕಟ್ಟಡ ದುರಂತ ಸಾಕಾಗಿಲ್ಲವೆ? ನಿಮ್ಮ ಹಣದ ದುರಾಸೆಗೆ ಇನ್ನೂ ಎಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳಬೇಕೆನ್ನುತ್ತೀರಿ? ನೆನಪಿಡಿ ದಾಜೀಬಾನಪೇಟೆ ಹುಬ್ಬಳ್ಳಿ ನಗರದ ಅತ್ಯಂತ್ಯ ಜನನಿಬಿಡ ಪ್ರದೇಶ. ಈಗಾಗಲೇ ಕಚ್ಚಾ ರಸ್ತೆ ಹಾಗೂ ಪಾರ್ಕಿಂಗ್ ಸಮಸ್ಯೆಗಳಿಂದಾಗಿ ಅಲ್ಲಿಯ ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ.

ತಕ್ಷಣ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶಿಸಬೇಕು ಹಾಗೂ ಕಟ್ಟಡ ಪರವಾನಿಗೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂಬುದು ಅಲ್ಲಿಯ ವ್ಯಾಪಾರಸ್ಥರ ಸಂಘದ ಒತ್ತಾಯವಾಗಿದೆ.

Edited By : Manjunath H D
Kshetra Samachara

Kshetra Samachara

07/12/2020 04:28 pm

Cinque Terre

86.59 K

Cinque Terre

11

ಸಂಬಂಧಿತ ಸುದ್ದಿ