ಅಣ್ಣಿಗೇರಿ: ನಮ್ಮದು ರೈತಾಪಿ ದೇಶ. ರೈತರು ದುಡಿದಾಗ ಮಾತ್ರ ನಮಗೆ ಒಂದು ತುತ್ತಿನ ಊಟ ಸಿಗುತ್ತದೆ. ಇಂತಹ ಪರಿಸ್ಥಿತಿ ಇರುವಾಗ ರೈತರ ಸಮಸ್ಯೆಗಳಿಗೆ ಕೊನೆಯಿಲ್ಲದಂತಾಗಿದೆ ರೈತ ಹುಟ್ಟಿದಾಗಿನಿಂದಲೇ ಅವನ ಬೆನ್ನಿಗೆ ಸಮಸ್ಯೆಗಳು ಅಂಟಿಕೊಂಡಿರುತ್ತದೆ.
ಬೆಳೆ ಹಾನಿ ಹವಾಮಾನ ವೈಪರೀತ್ಯ, ಬೆಲೆ ಕುಸಿತ, ಮಳೆಯ ಕಣ್ಣು ಮುಚ್ಚಾಲೆ, ಇವೆಲ್ಲದರ ನಡುವೆಯೂ ಕೆಲ ರೈತರು ಕೃಷಿಯಲ್ಲಿ ದುಡಿಯುವಂತಾಗಿದೆ. ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿ. ಇಳುವರಿ ಚೆನ್ನಾಗಿ ಬಂದಾಗ ಬೆಲೆ ಕುಸಿತ ಇವೆಲ್ಲಾ ಕಾರಣಗಳಿಂದ ರೈತ ಕೃಷಿ ಕ್ಷೇತ್ರವನ್ನು ತ್ಯಜಿಸಿ ಪಟ್ಟಣಗಳತ್ತ ಮುಖ ಮಾಡುತ್ತಿದ್ದಾನೆ. ತಮಗೆ ಬಂದ ಪರಿಸ್ಥಿತಿ ತಮ್ಮ ಮಕ್ಕಳಿಗೆ ಬರಬಾರದೆಂದು ರೈತರು ತಮ್ಮ ಮಕ್ಕಳಿಗೆ ಪಟ್ಟಣದ ಕಡೆ ಕಳಿಸುತ್ತಿದ್ದಾರೆ.
ಇದಕ್ಕೆ ಉತ್ತಮ ಉದಾಹರಣೆ ಅನ್ನುವ ಹಾಗೆ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ಅತಿವೃಷ್ಟಿಯಿಂದ ಹೆಸರಿನ ಬೆಳೆ ಸಂಪೂರ್ಣವಾಗಿ ಹಳದಿ ರೋಗಕ್ಕೆ ತುತ್ತಾಗಿ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಾಲಸೂಲ ಮಾಡಿ ಬೀಜ ಗೊಬ್ಬರಗಳನ್ನು ತಂದು ಬಿತ್ತನೆ ಮಾಡಿ ಇನ್ನೇನು ಸ್ವಲ್ಪ ದಿನಗಳ ನಂತರ ಹೆಸರಿನ ಬೆಲೆ ಕೈಗೆ ಬರುತ್ತಿತ್ತು. ಆದರೆ ಈಗ ಹೆಸರಿನ ಬೆಳೆ ಸಂಪೂರ್ಣವಾಗಿ ರೋಗಕ್ಕೆ ತುತ್ತಾಗಿದ್ದರಿಂದ ರೈತ ತಲೆ ಮೇಲೆ ಕೈ ಹೊತ್ತು ಕೂರುವ ಹಾಗಾಗಿದೆ.
ಕಳೆದ ಹದಿನೈದು ಇಪ್ಪತ್ತು ದಿನಗಳ ಹಿಂದೆ ಇದೇ ರೈತ ಮಳೆಗಾಗಿ ಜಪಿಸದ ದೇವರಿಲ್ಲ, ಈಗ ಮತ್ತೆ ಅದೇ ರೈತ ಮಳೆ ನಿಲ್ಲಿಸುವ ಹಾಗೆ ದೇವರ ಮೊರೆ ಹೋಗಿದ್ದಾನೆ. ಇದನ್ನು ನೋಡಿದರೆ ವಿಪರ್ಯಾಸ ಅಥವಾ ಕಾಕತಾಳೀಯ ಗೊತ್ತಿಲ್ಲ. ಒಟ್ಟಾರೆಯಾಗಿ ಇಷ್ಟು ದಿನ ರೈತ ಮಾಡಿದ್ದ ಕೃಷಿ ಚಟುವಟಿಕೆಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಆಗಿದೆ. ರೈತ ಇದಕ್ಕಾಗಿ ಸರಕಾರ ದಿಂದ ಬರುವ ಬೆಳೆ ಹಾನಿ ಪರಿಹಾರಕ್ಕೆ ಅವಲಂಬಿಸುವ ಸ್ಥಿತಿ ಬಂದೊದಗಿದೆ.
ವಿಶೇಷ ವರದಿ: ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
16/07/2022 10:00 am