ಅಣ್ಣಿಗೇರಿ: ರಾಜ್ಯಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಈ ಹಿನ್ನೆಲೆ ರೈತಾಪಿ ವರ್ಗದ ಜನರು ತಮ್ಮ ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಪ್ರಾರಂಭ ಮಾಡಿದ್ದಾರೆ.
ತಾಲೂಕಿನಲ್ಲಿ ಈ ಸಲ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಬಿತ್ತನೆ ಆಗಲಿದೆ ಎಂದು ಕೃಷಿ ಇಲಾಖೆಯ ಅಭಿಪ್ರಾಯವಾಗಿದೆ. ಹೀಗಿದ್ದರೂ ಸರ್ಕಾರದಿಂದ ರೈತರಿಗೆ ಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಬೆಳಿಗ್ಗೆ 4:00 ಗಂಟೆಗೆ ಪಟ್ಟಣಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತರೂ ರೈತನಿಗೆ ಬೇಕಾಗಿರುವ ಗೊಬ್ಬರ ಮಾತ್ರ ಸಿಗುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಬಿತ್ತನೆ ಮಾಡುವ ಅವಶ್ಯಕತೆ ಇರುವ ಗೊಬ್ಬರವನ್ನು ರೈತರು ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ.
ರೈತನೇ ದೇಶದ ಬೆನ್ನೆಲುಬು ಅಂತ ಕೇವಲ ಬಾಯಿ ಮಾತಲ್ಲಿ ಹೇಳುವಂತಾಗಿದೆ. ಆದರೆ ರೈತರಿಗೆ ಸಂಬಂಧಿತ ಕೃಷಿ ಚಟುವಟಿಕೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಂಕಷ್ಟಗಳಿಗೆ ಪರಿಹಾರ ಒದಗಿಸಿಕೊಡಬೇಕೆಂದು ರೈತಾಪಿ ವರ್ಗದ ಜನರ ಆಸೆಯಾಗಿರುತ್ತದೆ.
ವರದಿ: ನಂದೀಶ ಪಬ್ಲಿಕ್ ನೆಸ್ಟ್ ಅಣ್ಣಿಗೇರಿ
Kshetra Samachara
09/06/2022 03:40 pm