ಧಾರವಾಡ: ಹೈನುಗಾರಿಕೆಯಲ್ಲಿ ಕರುಗಳ ಪಾಲನೆಯೇ ಲಾಭಾಂಶ ಹೆಚ್ಚಿಸಲು ಕಾರಣವಾಗಿರುವುದರಿಂದ ಪಶು ಪಾಲಕರು ತಮ್ಮ ಕರುಗಳನ್ನು ಚೆನ್ನಾಗಿ ಪಾಲನೆ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರುಗಳ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಪಶುವೈದ್ಯಾಧಿಕಾರಿ ಡಾ. ಎಸ್.ವಿ.ಸಂತಿ ಹೇಳಿದರು.
ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ವಿಸ್ತರಣಾ ಘಟಕ ಬಲಪಡಿಸುವ ಯೋಜನೆಯಡಿ ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಡಿಸೆಂಬರ್ 17 ರಂದು ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರುಗಳ ಪಾಲನೆ ತಾಯಿಯ ಗರ್ಭದಲ್ಲಿದ್ದಾಗಲೇ ಪ್ರಾರಂಭವಾಗುತ್ತದೆ. ಗರ್ಭಧರಿಸಿದ ತಾಯಿ ಹಾಲು ಕೊಡದೇ ಇರುವಾಗಲೂ ಒಳ್ಳೆಯ ಮೇವು ನೀರಿನ ಜೊತೆಗೆ ಪ್ರತಿದಿನ ಕನಿಷ್ಠ ಒಂದು ಕಿಲೋ ಗ್ರಾಂ ತಿಂಡಿ ಮಿಶ್ರಣವನ್ನು ನೀಡಬೇಕು. ಕರು ಹುಟ್ಟಿದ ತಕ್ಷಣ ಹೊಕ್ಕಳ ಬಳ್ಳಿ ಚಿಕಿತ್ಸೆ , ಗಿಣ್ಣದ ಹಾಲು ಕುಡಿಸುವ ಬಗ್ಗೆ, ನಿಯಮಿತವಾಗಿ ಜಂತುನಾಶಕ ಔಷಧ ಹಾಕಿಸುವ ಬಗ್ಗೆ, ಸರಿಯಾದ ಪ್ರಮಾಣದಲ್ಲಿ ಹಾಲು ಕುಡಿಸುವುದು, ಮೇವು, ತಿಂಡಿ ಮಿಶ್ರಣ ಹಾಗೂ ಲವಣ ಮಿಶ್ರಣಗಳನ್ನು ನೀಡುವ ಬಗ್ಗೆ ವಿವರಿಸುತ್ತಾ, ಒಂದುವರೆಯಿಂದ ಎರಡು ವರ್ಷದೊಳಗೆ ಬೆದೆಗೆ ಬಂದು ಗರ್ಭಧರಿಸುವ ಹಾಗೆ ಮಾಡಬೇಕೆಂದು ತಿಳಿಸಿದರು. ಮಾರಣಾಂತಿಕ ಹಾಗೂ ಪ್ರಾಣಿಜನ್ಯ ಮಾನವ ರೋಗವಾದ ನಾಯಿ ಹುಚ್ಚು ರೋಗದ ಬಗ್ಗೆ, ನಾಯಿ ಕಚ್ಚಿದಾಗ ನಿರ್ಲಕ್ಷ ಬೇಡ. ರೋಗದ ಲಕ್ಷಣಗಳು ಕಂಡ ಮೇಲೆ ಚಿಕಿತ್ಸೆ ಇಲ್ಲ ಸಾವು ನಿಶ್ಚಿತ. ಆದರೆ ನಾಯಿ ಕಚ್ಚಿದ ತಕ್ಷಣ ನಿಯಮಿತವಾಗಿ ಲಸಿಕೆ ಹಾಕು ಮುಖಾಂತರ ನೂರಕ್ಕೆ ನೂರರಷ್ಟು ರೋಗವನ್ನು ತಡೆಗಟ್ಟಬಹುದೆಂದು ತಿಳಿಸಿದರು.
ನೆಲ್ಲಿಹರವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ವಿವಿಧ ಜಾತಿ-ಮಿಶ್ರತಳಿ (ಜರ್ಸಿ ಮತ್ತು ಹೆಚ್ ಎಫ್) ದೇಶಿ ತಳಿ (ಖಿಲ್ಲಾರ, ಗಿರ್, ಹಳ್ಳಿಕಾರ) ಹಾಗೂ ಸ್ಥಳೀಯ (ವಿಶಿಷ್ಟ ಲಕ್ಷಣಗಳಿಲ್ಲದ) ಜಾನುವಾರು- ಗಳ ಸುಮಾರು 80 ಹೆಣ್ಣು ಹಾಗೂ ಗಂಡು ಕರುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಎಲ್ಲ ಕರುಗಳಿಗೆ ಜಂತುನಾಶಕ ಔಷಧ ಕುಡಿಸಲಾಯಿತು.
ಗ್ರಾಮ ಪಂಚಾಯತ ಸದಸ್ಯರಾದ ಕಲ್ಮೇಶ ಪರ್ವಾಪೂರ, ರಾಜು ಪರ್ವಾಪೂರ, ಕೋಟೆಪ್ಪ ಕುಬ್ಯಾಳ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಿಂಗಪ್ಪ ಪರ್ವಾಪೂರ, ಹಾಗೂ ಗ್ರಾಮದ ಹಿರಿಯರು ಎಲ್ಲ ಕರುಗಳ ಮಾಲೀಕರಿಗೆ ಲವಣ ಮಿಶ್ರಣವನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಮಡಕಿಹೊನ್ನಳ್ಳಿ ಅಧ್ಯಕ್ಷ ಗಿರಿಜವ್ವ ಹರಿಜನ ವಹಿಸಿದ್ದರು.
Kshetra Samachara
17/12/2021 07:23 pm