ಬೆಳಗಾವಿ: ಮಂಗಳೂರು-ಮುಂಬೈ ನಡುವೆ ನಿರ್ಮಿಸಿರುವ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ರಾಜ್ಯ ಸರ್ಕಾರದ ಸಂಪೂರ್ಣ ಸಹಮತವಿದ್ದು, ಈ ನಿಟ್ಟಿನಲ್ಲಿ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಗಮನಸೆಳೆಯುವ ಸೂಚನೆಗಳಡಿ ಶಾಸಕರುಗಳಾದ ಕಿರಣ್ ಕುಮಾರ್ ಕೊಡ್ಗಿ ಮತ್ತು ವಿ. ಸುನೀಲ್‌ಕುಮಾರ್ ಅವರ ಗಮನಸೆಳೆಯುವ ಸೂಚನೆಗೆ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರ ಪರವಾಗಿ ಉತ್ತರಿಸಿದ ಸಚಿವ ಕೆ.ಜೆ. ಜಾರ್ಜ್, ಕೊಂಕಣ ರೈಲ್ವೆ ಈ ಹಿಂದೆಯೇ ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗಬೇಕಿತ್ತು. ಆದರೆ ನಷ್ಟದಲ್ಲಿ ನಡೆಯುತ್ತಿರುವ ಕಾರಣ, ಈ ಭಾಗದ ಯಾವುದೇ ರೈಲ್ವೆ ನಿಲ್ದಾಣಗಳು ಕೂಡ ಅಭಿವೃದ್ಧಿಯಾಗಲಿಲ್ಲ. ಕರ್ನಾಟಕದ ಪಾಲಿನ 270 ಕೋಟಿ ರೂ. ಗಳ ಶೇರು ಮೊತ್ತವನ್ನು ಯಾವ ರೀತಿ ಹೊಂದಾಣಿಕೆ ಮಾಡಬೇಕು ಎಂಬುದರ ಬಗ್ಗೆ ಈಗಾಗಲೆ ಪತ್ರ ವ್ಯವಹಾರ ನಡೆಸಲಾಗಿದೆ. ಭಾರತೀಯ ರೈಲ್ವೆಯೊಂದಿಗೆ ವಿಲೀನ ಆದಲ್ಲಿ, ಹೊಸ ರೈಲುಗಳು ಕೂಡ ಬರಲಿದ್ದು, ರೈಲು ನಿಲ್ದಾಣಗಳು ಕೂಡ ಸುಧಾರಣೆ ಕಾಣಲಿವೆ ಎಂದರು.
PublicNext
12/12/2024 10:50 pm