ನವಲಗುಂದ : ನವಲಗುಂದ ತಾಲೂಕಿನ ಬಹುತೇಕ ಗ್ರಾಮಗಳಿಗೆ ಮಳೆಯೇ ಆಧಾರ. ಮಳೆ ಬಂದರೆ ರೈತರ ಮುಖದಲ್ಲಿ ಕಳೆ, ಇಲ್ಲವಾದರೆ ಆತ ಕಣ್ಣೀರಿನಲ್ಲಿ ಕೈ ತೊಳೆಯಬೇಕಾಗಿತ್ತು. ಮಳೆಯನ್ನೇ ನಂಬಿದ್ದ ರೈತನಿಗೆ, ಬಿತ್ತಿದ ಬೀಜ ಬೆಳೆಯಾಗಿ ಕೈಸೇರುವದೆಂಬ ನಂಬಿಕೇ ಇರಲಿಲ್ಲ.
ತಾಲೂಕಿನ ಕಡದಳ್ಳಿ ಗ್ರಾಮವೂ ಈ ಸಮಸ್ಯೆಯಿಂದ ಹೊರತಾಗಿರಲಿಲ್ಲ. ಈ ಗ್ರಾಮ ಕೊನೆಯ ಗ್ರಾಮವಾಗಿದ್ದರಿಂದ ಮಲಪ್ರಭಾ ಕಾಲುವೆ ನೀರು ಬಂದರೆ ಬಂತು ಇಲ್ಲವಾದರೆ ಇಲ್ಲ. ರೈತರಲ್ಲಿ ಒಂದು ರೀತಿ ಹತಾಶೆ ಭಾವನೆ ಮೂಡಿತ್ತು.
ಮಳೆ ನೀರನ್ನು ಸಂಗ್ರಹಿಸುವ ಕೃಷಿಹೊಂಡ ಯೋಜನೆ ಮೂಲಕ ದೇಶಪಾಂಡೆ ಫೌಂಡೇಶನ್ ಆಸರೆಯಾಗಿ ಬಂದಾಗ ಅನಿಶ್ಚತತೆಯ ಕಾರ್ಮೋಡ ಮಾಯವಾಯಿತು. 100 ಅಡಿ ಉದ್ದ 100 ಅಡಿ ಅಗಲ ಹಾಗೂ 12 ಅಡಿ ಆಳದ ಕೃಷಿಹೊಂಡ ಇಂದು ನೀರಿನ ಸಮಸ್ಯೆ ಬಗೆಹರಿಸಿದೆ ಎಂದು ಹೇಳುತ್ತಾರೆ ಕಡದಳ್ಳಿ ಗ್ರಾಮದ ನಾಗನಗೌಡ ನಿಂಗನಗೌಡ ಮುದೆಗೌಡ್ರ.
ಮುಂಗಾರು ಇರಲಿ ಹಿಂಗಾರು ಇರಲಿ, ಮಳೆ ಬರಲಿ ಬಾರದಿರಲಿ, ಕೃಷಿಹೊಂಡದ ನೀರನ್ನು ಸಮರ್ಪಕವಾಗಿ ಬಳಸಿ ಬೆಳೆಯನ್ನು ಪಡೆಯುತ್ತಿದ್ದೇವೆ. ಹೊಂಡ ತೆಗೆಯುವ ಪೂರ್ವದಲ್ಲಿ ಹೆಸರು, ಹತ್ತಿ, ಗೋದಿ, ಕಡಲೆ ಬೆಳೆಯುತ್ತಿದ್ದೆವು. ಬೆಳೆದ ಪೈರು ಕೈಗೆ ಬರುತ್ತದೆ ಎಂಬ ಗ್ರಾರಂಟಿಯೇ ಇರಲಿಲ್ಲ. ಏಕೆಂದರೆ ಕೊನೆ ಹಂತದಲ್ಲಿ ಮಳೆ ಕೈಕೊಡುತ್ತಿತ್ತು. ಈಗ ಯಾವುದೇ ಭಯವಿಲ್ಲ. ಮಳೆ ಕೈಕೊಟ್ಟರು ಒಂದರೆಡು ಬಾರಿ ನೀರು ಹಾಯಿಸಿ ಬೆಳೆ ತೆಗೆಯುತ್ತಿದ್ದೇವೆ ಎಂದು ಹೇಳುತ್ತಾರೆ ಮುದಿಗೌಡ್ರ.
ತಮ್ಮದು ಒಟ್ಟು 9 ಎಕರೆ ಜಮೀನು ಇದ್ದು ,ಫೌಂಡೇಶನ್ ಎಫ್ ಪಿಒ ಮೂಲಕ ರೈತರಿಗೆ ಬೀಜ, ಗೊಬ್ಬರ ಕ್ರಿಮಿ ನಾಶಕ ಪೂರೈಸುತ್ತಿದೆಯಲ್ಲದೆ ಕಾಲಕಾಲಕ್ಕೆ ಅವುಗಳ ಬಳಕೆ ಕುರಿತು ತರಬೇತಿ ನೀಡುತ್ತಿದೆ. ಈಗ ಸೂರ್ಯಪಾನ ಸೇರಿದಂತೆ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದೇವೆ. ಇನ್ನು ಮುಂದೆ ವಾಣಿಜ್ಯ ದೃಷ್ಟಿಯಿಂದ ಶ್ರೀಗಂಧ, ರಕ್ತ ಚಂದನ ಬೆಳೆಯುವ ಉದ್ದೇಶವಾಗಿದೆ. ಈ ಮೊದಲು ಎಕರೆಗೆ ಕೇವಲ 1 ರಿಂದ 1.50 ಲಕ್ಷ ರೂ ಆದಾಯ ಬರುತ್ತಿತ್ತು. ಈಗ ಸಮಾರು 3 ಲಕ್ಷ ರೂ ಆದಾಯ ಬರುತ್ತಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ.
Kshetra Samachara
27/02/2021 09:13 pm