ತಣ್ಣಗ ಬೀಳತೈತಿ ನೋಡ ತಂಗಿ ಮಳಿ ಹನಿ, ಏನ ಚೆಂದ ಬೆಳದಾವ ಜ್ವಾಳದ ತೆನಿ, ಜಿಗದ್ಯಾಡಿ ರಾಶಿ ಮಾಡಿದ್ರ ಅದು ಬಂಗಾರದ ಗಣಿ ವ್ಯವಸಾಯವನ್ನೇ ಜೀವನಾಧಾರ ಮಾಡ್ಕೊಂಡು ದುಡಿಯುತ್ತಿದ್ದ ನಮ್ಮ ಕೃಷಿಕ ಜನಪದರು ಹೇಳಿದ ಮಾತಿದು. ಹಿಂಗಾರು ಇರಲಿ. ಮುಂಗಾರೇ ಬರಲಿ. ದುಡಿಮೆಯ ಛಲ ಮಾತ್ರ ಕಡಿಮೆಯಾಗದಿರಲಿ ಎಂಬ ಬದುಕಿನಾದರ್ಶದ ನಡೆ ನಮ್ಮ ರೈತಾಪಿ ವರ್ಗದ್ದು. ದೇಶಕ್ಕೆ ಅನ್ನ ಹಾಕಿದರೂ ಎಂದೂ ಮೆರೆಯದೇ ಎಂದೆಂದೂ ಬೀಗದೇ, ಎನ್ನ ಪಾಡೆನಗಿರಲಿ ಎಂಬಂತೆ ಬದುಕುವವನು ನಮ್ಮ ರೈತ ಮಾತ್ರ.
ಹೀಗೆ ಸ್ವಾಭಿಮಾನಿಯಾಗಿ, ಸ್ವಾವಲಂಬಿಯಾಗಿ, ಸರಳ ಜೀವಿಯಾಗಿ ಅನ್ನ ಬೆಳೆಯುತ್ತ ಸಂಪನ್ನ ಜೀವನ ನಡೆಸುವ ಈ ರೈತನ ಬಗ್ಗೆ ನಾವ್ ಹೇಳ್ತೀವಿ ಕೇಳಿ.
ಇವರು ಅನ್ನದಾತ ರವಿ ಗಂಗಲ್. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಪ್ರಗತಿಪರ ಕೃಷಿಕ. ಎಸ್ಸೆಸ್ಸೆಲ್ಸಿ ವರೆಗೆ ಓದಿದ ಇವರು ಕೃಷಿಯನ್ನೇ ನಂಬಿದ್ದಾರೆ. ಅವರಿವರಂತಲ್ಲ, ಎಲ್ಲರಂತಲ್ಲ ಎಲ್ಲರೂ ಮೆಚ್ಚುವಂತೆ ತಮ್ಮ ಕಾಯಕದಲ್ಲಿ ಸಾಧನೆ ಮಾಡಬೇಕೆಂಬ ಸಂಕಲ್ಪ ಮಾಡಿದ್ದ ಇವರ ಬೆನ್ನಿಗೆ ನಿಂತಿದ್ದೇ ದೇಶಪಾಂಡೆ ಫೌಂಡೇಶನ್.
ಮಳೆಯಾಶ್ರಿತ ಬೇಸಾಯವಾದರೂ ರವಿ ಅವರು ಮಳೆಯನ್ನ ನಂಬಿ ಕೂರಲಿಲ್ಲ. ಅದಕ್ಕೆ ಹೊರತಾಗಿ ತಮ್ಮ ಮೂರುವರೆ ಎಕರೆ ಹೊಲದಲ್ಲಿ ಕೃಷಿ ನಿರ್ಮಿಸಿಕೊಂಡಿದ್ದಾರೆ. ಸಕಾಲಕ್ಕೆ ಬೆಳೆಗೆ ನೀರುಣಿಸಿ ಪರಂಪರಾಗತ ಕೃಷಿ ಪದ್ಧತಿಗೆ ಮಾದರಿಯಾಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೇ ಸಾವಯವಕ್ಕೆ ಸಾವಿಲ್ಲ ಎಂಬಂತೆ ಸಹಜ ಬೇಸಾಯದಲ್ಲಿ ಬಂಗಾರ ಬೆಳೆ ಬೆಳೆದಿದ್ದಾರೆ. ಇದಕ್ಕೆಲ್ಲ ದೇಶಪಾಂಡೆ ಫೌಂಡೇಶನ್ ಹೇಗೆಲ್ಲೆ ನೆರವಾಯಿತು? ಅನ್ನೋದನ್ನ ಅನ್ನದಾತ ರವಿ ಗಂಗಲ್ ಅವರೇ ಹೇಳ್ತಾರೆ ಕೇಳಿ
ಕೇವಲ ಮೂರುವರೆ ಎಕರೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಆದಾಯ ಪಡೆಯೋದು ಸಾಧನೆಯೇ ಸರಿ. ಅದನ್ನ ರೈತ ರವಿ ಗಂಗಲ್ ಅವರು ಸಾಧಿಸಿ ತೋರಿದ್ದಾರೆ. ಹೆಚ್ಚು ಇಳುವರಿ ಪಡೆಯೋದಕ್ಕಿಂತ ಉತೃಷ್ಟ ಗುಣಮಟ್ಟದ ಧಾನ್ಯ ಬೆಳೆಯುವ ಗುರಿ ಹೊಂದಿದ್ದಾರೆ.
ಇದಿಷ್ಟೇ ಅಲ್ಲ. ಫಾರ್ಮರ್ ಪ್ರೊಡಕ್ಷನ್ ಆರ್ಗನೈಜೇಶನ್ ನ ಕಲ್ಮೇಶ್ವರ ಸಂಘದ ಲಾಭ ಪಡೆದ ಇವರು, ಅದರ ಲಾಭದ ಬಗ್ಗೆ ಇತರ ರೈತರಿಗೂ ಜಾಗೃತಿ ಮೂಡಿಸ್ತಿದ್ದಾರೆ.
ನಮ್ಮ ಹಳ್ಳಿ ಊರ ನಮಗ ಪಾಡ...ನಮ್ಮ ಹಳ್ಳಿ ಊರ ನಮಗ ಪಾಡ..ಯಾತಕವ್ವ ಹುಬ್ಬಳ್ಳಿ ಧಾರವಾಡ? ಹೀಗಂತಾ ಸಾವಿರ ಹಾಡುಗಳ ಸರದಾರ ಹುಕ್ಕೇರಿ ಬಾಳಪ್ಪ ಅವರು ಹಾಡಿದ್ದಾರೆ. ಆ ಸಾಲಿನಲ್ಲೇ ರವಿ ಗಂಗಲ್ ಅವರಂತ ಸಾವಿರಾರು ಅನ್ನದಾತರ ಬದುಕಿನ ಅರ್ಥ ಇದೆ. ಅಲ್ಲವೇ..?
Kshetra Samachara
14/02/2021 03:49 pm