ನವಲಗುಂದ: ಯಾವುದೇ ಕಾಯಕ ಮಾಡುವ ಇತರರು ಸ್ವಲ್ಪ ದಿನದ ಮಟ್ಟಿಗೆ ಕೆಲಸ ನಿಲ್ಲಿಸಿದ್ರೆ ಲೋಕ ಹೇಗೋ ಏನೋ ನಡೆಯುತ್ತೆ. ಆದ್ರೆ ನಮ್ಮ ಅನ್ನದಾತರ ಕುಲ ಶಾಶ್ವತವಾಗಿ ತಮ್ಮ ಕೆಲಸ ನಿಲ್ಲಿಸಿಬಿಟ್ರೆ ನೆಲದ ಮೇಲಿನ ಸಕಲ ಹುಲು ಮಾನವರು ಬದುಕುವುದೇ ಕಷ್ಟ. ಹೀಗಾಗಿ ಅನ್ನದಾತರ ಹುದ್ದೆಗಿಂತ ಉನ್ನತ ಹುದ್ದೆ ಇನ್ನೊಂದಿಲ್ಲ. ಮನುಕುಲಕೆ ಅನ್ನ ಹಾಕುವ ಧರ್ಮಕ್ಕಿಂತ ಶ್ರೇಷ್ಟ ಧರ್ಮ ಮತ್ತೊಂದಿಲ್ಲ.
ಇಂತಹ ಮಹದುದ್ದೇಶ ಇಟ್ಟುಕೊಂಡು ನಿಸ್ವಾರ್ಥದಿಂದ ನೆಲ ಹಿಡಿದು ದುಡಿಯುತ್ತಿದ್ದಾರೆ ಈ ಹೆಮ್ಮೆಯ ಅನ್ನದಾತ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಶ್ರಮಜೀವಿ ರೈತ, ನಾರಾಯಣ ಬಂಡಿ ಅವರ ಯಶೋಗಾಥೆ ಇದು. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬಂತೆ ಓದಿದ್ದು ನಾಲ್ಕನೇ ತರಗತಿಯಾದರೂ ವರ್ಷಕ್ಕೆ ಟನ್ ಗಟ್ಟಲೇ ಧಾನ್ಯ ಬೆಳೆಯುತ್ತಾರೆ. ಇವರಿಗೆ ಇರೋದು ಕೇವಲ ನಾಲ್ಕೆಕರೆ ಜಮೀನು.
ಆದರೂ ನೀರಾವರಿ ಇರುವ ರೈತರಿಗೂ ಸವಾಲಾಗುವಂತೆ ಉಟ್ಕೃಷ್ಟ ಗುಣಮಟ್ಟದ ಫಸಲು ತೆಗೆಯುತ್ತಾರೆ. ವಾಡಿಕೆಗಿಂತಲೂ ಹೆಚ್ಚು ಇಳುವರಿ ಪಡೆದು ಲಕ್ಷಾಧಿಪತಿ ರೈತ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ. ಕೃಷಿ ಎಂದರೆ ತಾತ್ಸಾರ ಮಾಡಿ ಪಟ್ಟಣ ಸೇರುವ ಯುವಜನರಿಗೆ ತಕ್ಕ ಉತ್ತರ ನೀಡಿದ್ದಾರೆ.
ಅನ್ನದಾತ ನಾರಾಯಣ ಬಂಡಿ ಅವರ ಈ ನೆಮ್ಮದಿಯ ಬದುಕಿಗೆ, ಈ ಸಾಧನೆಗೆ ಸ್ಫೂರ್ತಿ ತುಂಬಿದ್ದೇ ದೇಶಪಾಂಡೆ ಫೌಂಡೇಶನ್. ಹಾಗಂತಾ ಸ್ವತಃ ನಾರಾಯಣ ಬಂಡಿ ಅವರೇ ಹೇಳ್ತಾರೆ. ತಿರ್ಲಾಪುರ ಗ್ರಾಮದ ಇತರ ರೈತರು ದೇಶಪಾಂಡೆ ಫೌಂಡೇಶನ್ ನ ನೆರವು ಹಾಗೂ ಮಾರ್ಗದರ್ಶನ ಪಡೆದು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.
ಇದರ ಬಗ್ಗೆ ತಿಳಿದು ಆಸಕ್ತಿ ಮೂಡಿಸಿಕೊಂಡ ನಾರಾಯಣ ಬಂಡಿ ಅವರು ತಮ್ಮ ಹೊಲದಲ್ಲೂ ಕೃಷಿ ಹೊಂಡ ನಿರ್ಮಿಸಲು ಇಚ್ಛಿಸಿದ್ದಾರೆ. ತಮ್ಮೂರಿನ ದೇಶಪಾಂಡೆ ಫೌಂಡೇಶನ್ ಪ್ರತಿನಿಧಿಗಳನ್ನ ಸಂಪರ್ಕ ಮಾಡಿ ತಮ್ಮ ಹೊಲದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಆ ಮೂಲಕ ಹಸಿರ ಬೆಳೆ ಎಂಬ ಉಸಿರ ಹೊನ್ನು ಬೆಳೆಯುತ್ತಿದ್ದಾರೆ.
ಅನ್ನ ದೇವರಿಗಿಂತ ಇನ್ನು ದೇವರಿಲ್ಲ ಎಂಬ ಮಾತು ಎಷ್ಟು ಸತ್ಯವೋ ಅನ್ನ ಬೆಳೆದ ರೈತನಿಗಿಂತ ಉನ್ನತವಾದ ವ್ಯಕ್ತಿ ಇನ್ನೊಬ್ಬರಿಲ್ಲ ಎಂಬ ಮಾತು ಅದರಷ್ಟೇ ಸತ್ಯ. ಅನ್ನ ಬೆಳೆಯುವುದು ಮಣ್ಣಿನಿಂದ, ಜಗ ಉಸಿರಾಡುವುದು ಅನ್ನದಾತನಿಂದ.
Kshetra Samachara
12/02/2021 09:09 pm