ಅಣ್ಣಿಗೇರಿ: ಈಗಿನ ಕಾಲದಲ್ಲೂ ಕಿಂಚಿತ್ತೂ ರಾಸಾಯನಿಕ ಗೊಬ್ಬರ ಬಳಸದೇ ಕೃಷಿ ಮಾಡೋದು ಒಂದು ಸಾಧನೆಯೇ ಸರಿ. ಅದರಲ್ಲೂ ಪರಂಪರಾಗತ ಪದ್ಧತಿಯ ಸಾವಯವ ಕೃಷಿ ಮಾಡಿ ಲಕ್ಷಾಂತರ ಆದಾಯ ಗಳಿಸೋದು ಅದಕ್ಕಿಂತಲೂ ಕಷ್ಟ. ಆದ್ರೆ ಇದನ್ನ ಸಾಧಿಸಿ ತೋರಿಸಿರುವ ಪ್ರಗತಿಪರ ಅನ್ನದಾತ ಇಲ್ಲಿದ್ದಾರೆ ನೋಡಿ.
ಇವರ ಹೆಸ್ರು ಮಹದೇವಪ್ಪ ಶಾನವಾಡ. ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ಹಿರಿಯ ರೈತ. ಪಕ್ಕಾ ಕೃಷಿ ಕುಟುಂಬದಲ್ಲೇ ಜನಿಸಿದ ಇವರು ಸುಸ್ಥಿರ ಕೃಷಿ ಪದ್ಧತಿ ಅನುಸರಿಸಿ ಆರೋಗ್ಯಕರ ಫಸಲು ಬೆಳೆಯುತ್ತಿದ್ದಾರೆ. 55ವರ್ಷ ವಯಸ್ಸಿನ ಈ ರೈತ ಛಲದಂಕ ಮಲ್ಲನಂತೆ ಛಲವಿಟ್ಟು ದುಡಿಯುತ್ತಾರೆ. ಕೇವಲ ನಾಲ್ಕನೇ ತರಗತಿವರೆಗೆ ಓದಿರುವ ಇವರು ವರ್ಷಕ್ಕೆ 8ರಿಂದ 10 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಬರೀ 6ಎಕರೆ ಜಮೀನಿನಲ್ಲಿ ವರ್ಷಕ್ಕೆ ಸರಿಸುಮಾರು 10 ಲಕ್ಷ ಆದಾಯ ಗಳಿಸಲು ಸಾಧ್ಯನಾ? ಅಂತಾ ನೀವೆಲ್ಲ ಅಚ್ಚರಿಪಡಬಹುದು. ಇದು ಸತ್ಯ. ಪ್ರಗತಿಪರ ರೈತ ಮಹದೇವಪ್ಪ ಶಾನವಾಡ ಅವರ ಈ ಯಶಸ್ಸಿನ ಹಿಂದೆ ಬಲವಾಗಿ ನಿಂತಿದ್ದು ದೇಶಪಾಂಡೆ ಫೌಂಡೇಶನ್.
ಬಲ್ಲರವಾಡ ಗ್ರಾಮದ ಇತರ ರೈತರು ತಮ್ಮ ಹೊಲದಲ್ಲಿ ದೇಶಪಾಂಡೆ ಫೌಂಡೇಶನ್ ನೆರವಿನಿಂದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಆ ಮೂಲಕ ವಾಡಿಕೆಗಿಂತಲೂ ಉತ್ತಮ ಗುಣಮಟ್ಟದ ಫಸಲು ಹಾಗೂ ಅಧಿಕ ಇಳುವರಿ ಪಡೆಯುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡ ಮಹದೇವಪ್ಪ ಶಾನವಾಡ ಅವರು ದೇಶಪಾಂಡೆ ಫೌಂಡೇಶನ್ ಪ್ರತಿನಿಧಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದು ತಮ್ಮ ಹೊಲದಲ್ಲೂ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಅದೇ ನೀರಿನಿಂದ ಹೊಲದಲ್ಲಿ ಹಚ್ಚ ಹಸಿರಿನ ಪೈರು ಬೆಳೆದಿದ್ದಾರೆ. ಈ ಯಶಸ್ಸಿನ ಪಯಣವನ್ನು ಹಿರಿಯ ರೈತ ಮಹದೇವಪ್ಪ ಶಾನವಾಡ ಹೇಳೋದು ಹೀಗೆ...
ಒಟ್ಟು ಹೊಲಕ್ಕೆ ಇಡಿಯಾಗಿ ಕೊಟ್ಟಿಗೆ ಗೊಬ್ಬರವನ್ನೇ ಬಳಸುವ ಮಹದೇವಪ್ಪ ಅವರು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ಹಿಂಗಾರು- ಮುಂಗಾರು ಸೇರಿ ಜೊತೆಗೆ ಕೆಲವು ತರಕಾರಿ ಬೆಳೆಗಳನ್ನೂ ಬೆಳೆಯುತ್ತಾರೆ. ಮತ್ತು ತಮ್ಮ ಕೃಷಿ ಹೊಂಡದ ಬದುವಿನಲ್ಲಿ ತೆಂಗು, ಕರಿಬೇವು, ಹೆಬ್ಬೇವು ಪೇರಲ ಮರ ಸೇರಿದಂತೆ ಅಲ್ಪಾವಧಿ ತರಕಾರಿಗಳನ್ನೂ ಬೆಳೆದಿದ್ದಾರೆ. ಇದೆಲ್ಲದಕ್ಕೆ ನೆರವಾಗಿದ್ದು ಮತ್ತು 8ರಿಂದ ಹತ್ತು ಲಕ್ಷ ಆದಾಯ ಗಳಿಸಲು ಸಾಧ್ಯವಾಗಿದ್ದು ದೇಶಪಾಂಡೆ ಫೌಂಡೇಶನ್ ನಿರ್ಮಿಸಿಕೊಟ್ಟ ಕೃಷಿಹೊಂಡದಿಂದ ಅಂತಾ ಈ ಹಿರಿಯ ರೈತ ಮಹದೇವಪ್ಪ ಹೆಮ್ಮೆಯಿಂದ ಹೇಳುತ್ತಾರೆ.
ಇದಿಷ್ಟೇ ಅಲ್ಲ. ಫಾರ್ಮರ್ ಪ್ರೊಡಕ್ಷನ್ ಆರ್ಗನೈಸೇಶನ್ ನಡೆಸುತ್ತಿರುವ ಕಲ್ಮೇಶ್ವರ ಸಂಘದ ಲಾಭವನ್ನೂ ಪಡೆಯುತ್ತಿರುವ ಇವರು ಉತ್ತಮ ಗುಣಮಟ್ಟದ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ನಿರೀಕ್ಷಿತ ಪ್ರಮಾಣಕ್ಕಿಂತಲೂ ಉತ್ತಮ ಇಳುವರಿ ಪಡೆಯುತ್ತಿರುವುದಕ್ಕೆ ಇದೂ ಒಂದು ಕಾರಣ ಎನ್ನುತ್ತಾರೆ.
ಮಣ್ಣಿಂದಲೇ ಅನ್ನ, ಮಣ್ಣಿಂದಲೇ ಚಿನ್ನ, ಮಣ್ಣಿಂದಲೇ ತ್ರಾಣ, ಮಣ್ಣಿಂದಲೇ ಪ್ರಾಣ, ಮಣ್ಣಿಂದಲೇ ಈ ಲೋಕವು ಬಲು ಚೆನ್ನ..ಹೀಗಂತ ಚಿತ್ರ ಸಾಹಿತಿ ಚಿ. ಉದಯಶಂಕರ್ ಮಣ್ಣಿನ ಗುಣಗಾನ ಮಾಡಿದ್ದಾರೆ. ಅದರಂತೆ ಈ ಕವಿಯ ಮಾತನ್ನ ನಿಜರೂಪಕ್ಕೆ ತಂದಿದ್ದಾರೆ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ಈ ರೈತ..
Kshetra Samachara
03/02/2021 09:57 pm