ವರದಿ: ಮಲ್ಲೇಶ ಸೂರಣಗಿ ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ
ಹುಬ್ಬಳ್ಳಿ: ಪ್ರತಿ ಜಾತ್ರೆಯೂ ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ. ಆದರೆ, ಈ ಜಾತ್ರೆ ಮಾತ್ರ ವಿಭಿನ್ನ- ವಿಶೇಷ ಸಂಪ್ರದಾಯ ಒಳಗೊಂಡಿದ್ದು, ಕೃಷಿ ಹಾಗೂ ಹಾಲು ಉತ್ಪಾದನೆ ಚಟುವಟಿಕೆಗೆ ಉತ್ತೇಜನ ನೀಡುವ ಕಾರ್ಯಕ್ಕೆ ಮುಂದಾಗಿದೆ. ಹಾಗಿದ್ದರೆ, ಯಾವುದು ಆ ಜಾತ್ರೆ ಅಂತೀರಾ ಈ ಸ್ಟೋರಿ ನೋಡಿ...
ಉತ್ತರ ಕರ್ನಾಟಕದ ಆರಾಧ್ಯದೈವ ಸದ್ಗುರು ಸಿದ್ಧಾರೂಢರ ಜಾತ್ರೆ ಎಂದರೆ ಸಾಕು ಎಲ್ಲರಿಗೂ ಅಚ್ಚುಮೆಚ್ಚು. ಹುಬ್ಬಳ್ಳಿ ಜನ ಮಾತ್ರವಲ್ಲ, ನಾಡಿನ ವಿವಿಧ ಮೂಲೆಗಳಿಂದಲೂ ಜನರು ಆಗಮಿಸುತ್ತಾರೆ. ವಾರಗಟ್ಟಲೆ ನಡೆಯುವ ಜಾತ್ರೆಯಲ್ಲಿ ಹಾಲು ಕರೆಯುವ ಸ್ಪರ್ಧೆ ವಿಶೇಷವಾಗಿದೆ. ಹೌದು, ಜಾನುವಾರುಗಳ ಹೆಚ್ಚು ಹಾಲು ಉತ್ಪಾದನೆ ಮತ್ತು ಸಾಕಾಣಿಕೆ ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೈನುಗಾರಿಕೆ, ಕೃಷಿಯೇತರ ಚಟುವಟಿಕೆ ಉತ್ತೇಜನಕ್ಕೂ ಈ ಸ್ಪರ್ಧೆ ಪೂರಕವೂ ಹೌದು.
ಪಶುಪಾಲನೆ- ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಕೆಎಂಎಫ್ ವತಿಯಿಂದ ನಡೆದ ಸ್ಪರ್ಧೆಗೆ ಜಿಲ್ಲೆಯ ನಾನಾ ಕಡೆಗಳಿಂದ ಹೈನುಗಾರರು ಆಗಮಿಸಿದ್ದು, ತಮ್ಮ ಜಾನುವಾರಿನ ಹಾಲು ಕರೆಯುವ ಸಾಮರ್ಥ್ಯ ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಯುವಕರು- ಮಹಿಳೆಯರು ಪಾಲ್ಗೊಂಡು ಜಾತ್ರೆ ಮೆರುಗನ್ನು ಹೆಚ್ಚಿಸಿದರು.
ಒಟ್ಟಿನಲ್ಲಿ ನಗರೀಕರಣದ ಭರಾಟೆ ನಡುವೆಯೂ ಹಾಲು ಕರೆಯುವ ಸ್ಪರ್ಧೆಯಲ್ಲಿ ಹಲವು ಮಂದಿ ನಾನಾ ವಯಸ್ಕರು ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಅಲ್ಲದೆ, ಜಾನುವಾರು ಸಾಕಾಣಿಕೆ- ಹಾಲು ಕುರಿತಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
Kshetra Samachara
09/03/2022 05:41 pm