ವರದಿ: ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ
ಧಾರವಾಡ: ಸಾಲ ಶೂಲ ಮಾಡಿ ಬೆಳೆದ ಬೆಳೆಗಳು ಕೈಗೆ ಬಾರದೇ ಅನ್ನದಾತ ಈಗಾಗಲೇ ಕಂಗಾಲಾಗಿದ್ದಾನೆ. ನಾಶವಾದ ಬೆಳೆಗಳಿಗೆ ಸರ್ಕಾರದ ಪರಿಹಾರವೂ ಸಿಗದೇ ರೈತ ಇಂದಿಗೂ ಪರದಾಡುತ್ತಿದ್ದಾನೆ. ನಿರಂತರ ಸುರಿದ ಮಳೆಯಿಂದ ಸಂಕಷ್ಟದಲ್ಲಿರುವ ಧಾರವಾಡ ಜಿಲ್ಲೆಯ ರೈತರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನು ಅಂತೀರಾ? ಈ ಸ್ಟೋರಿ ನೋಡಿ.
ಕೊರೊನಾ ಬಂದಿದ್ದೇ ಬಂದಿದ್ದು ಇದರಿಂದ ತೊಂದರೆಗೊಳಗಾಗದ ಸಮುದಾಯವೇ ಇಲ್ಲ. ಇದೀಗ ಕೊರೊನಾದಿಂದ ಕಬ್ಬು ಬೆಳೆಗಾರ ಸಹಿತ ಸಂಕಷ್ಟ ಎದುರಿಸುತ್ತಿದ್ದಾನೆ. ಹೌದು ಧಾರವಾಡ ಜಿಲ್ಲೆಯಲ್ಲಿ ಬೆಳೆದ ಕಬ್ಬು ಕಟಾವು ಮಾಡಲು ಮಹಾರಾಷ್ಟ್ರದ ಕೂಲಿ ಕಾರ್ಮಿಕರನ್ನು ಏಜೆಂಟರು ಕರೆ ತರುತ್ತಿದ್ದರು. ಆ ಏಜೆಂಟರು ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರೋ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಿದ್ದರು. ಯಾವಾಗ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಗಿದೆ ಅನ್ನೋದು ರೈತರಿಗೆ ಗೊತ್ತಾಯಿತೋ ಅವರು ಕರ್ನಾಟಕದ ವಿವಿಧ ಕಡೆಗಳಿಂದ ಕಬ್ಬು ಕತ್ತರಿಸಲು ಕಾರ್ಮಿಕರನ್ನು ಕರೆಯಿಸಿ, ಕಟಾವು ಮಾಡಿಸುತ್ತಿದ್ದಾರೆ. ಹೀಗೆ ಕಟಾವಾದ ಕಬ್ಬನ್ನು ಕಾರ್ಖಾನೆಯವರು ಖರೀದಿಸಲು ಮುಂದಾಗುತ್ತಿಲ್ಲ. ಮಹಾರಾಷ್ಟ್ರದ ಕಾರ್ಮಿಕರನ್ನು ಕರೆ ತರುವ ಏಜೆಂಟರ ಮೂಲಕ ಬಂದಿದ್ದರಷ್ಟೇ ಕಬ್ಬನ್ನು ತೆಗೆದುಕೊಳ್ಳೋದಾಗಿ ಕಾರ್ಖಾನೆಯವರು ಹೇಳುತ್ತಿದ್ದಾರೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಧಾರವಾಡ, ಅಳ್ನಾವರ ಹಾಗೂ ಕಲಘಟಗಿ ತಾಲೂಕಿನ ಸಾವಿರಾರು ರೈತರು ಈಗಾಗಲೇ ಕಬ್ಬು ಕಟಾವು ಆರಂಭಿಸಿದ್ದಾರೆ. ಆದರೆ ಹೀಗೆ ಕಟಾವಾದ ಕಬ್ಬನ್ನು ಕಾರ್ಖಾನೆಗೆ ತೆಗೆದುಕೊಂಡು ಹೋದರೆ ವಾಹನಗಳನ್ನು ಕಾರ್ಖಾನೆ ಒಳಗಡೆ ಬಿಟ್ಟುಕೊಳ್ಳುತ್ತಿಲ್ಲ ಅನ್ನೋದು ರೈತರ ಅಳಲು. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿರೋ ಆರ್.ವಿ. ದೇಶಪಾಂಡೆ ಮಾಲಿಕತ್ವದ ಪ್ಯಾರಿ ಶುಗರ್ಸ್ ನಲ್ಲಂತೂ ಧಾರವಾಡ ಜಿಲ್ಲೆಯ ರೈತರ ಕಬ್ಬನ್ನು ಖರೀದಿಸುತ್ತಲೇ ಇಲ್ಲವಂತೆ. ಹೀಗಾಗಿ ರೈತರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮೂಲದ ಕಾರ್ಮಿಕರನ್ನು ಕರೆಯಿಸದೇ ಇದ್ದಿದ್ದಕ್ಕೆ ಇಂತದ್ದೊಂದು ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ ಅನ್ನೋದು ರೈತರ ಅಳಲು.
ಕಳೆದ ಬಾರಿ ಕಬ್ಬು ಕೈಗೆ ಬಂದಾಗ ಕೊರೊನಾ ಹೊಡೆತದಿಂದ ರೈತರು ಕಬ್ಬನ್ನು ಕಟಾವು ಹಾಗೂ ಮಾರಾಟ ಮಾಡಲಾಗದೇ ನಷ್ಟ ಅನುಭವಿಸಿದ್ದರು. ಆದರೆ ಇದೀಗ ಕೃಷಿ ರಂಗ ಸುಧಾರಿಸಿಕೊಳ್ಳುತ್ತಿದೆ ಅಂತಾ ಸಮಾಧಾನಪಟ್ಟುಕೊಳ್ಳುವ ಹೊತ್ತಿಗೆ ಜಿಲ್ಲೆಯ ರೈತರಿಗೆ ಇಂತದ್ದೊಂದು ಬರೆ ಬಿದ್ದಿದೆ. ಕೊರೊನಾ ಭೀತಿಯಲ್ಲಿ ರೈತರು ತೆಗೆದುಕೊಂಡ ಸಣ್ಣದೊಂದು ನಿರ್ಧಾರ ಈ ರೀತಿ ಅವರ ಬದುಕನ್ನು ಮೂರಾಬಟ್ಟೆ ಮಾಡುತ್ತದೆ ಅನ್ನೋದನ್ನು ಯಾರೂ ಊಹಿಸಿರಲಿಲ್ಲ. ಹೀಗಾಗಿ ಕೂಡಲೇ ಸರಕಾರ ಇವರ ಸಮಸ್ಯೆಯತ್ತ ಗಮನ ಹರಿಸಿ, ಕಾರ್ಖಾನೆಯವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ರೈತರ ಬದುಕು ನೇಣಿನ ಕುಣಿಕೆಯತ್ತ ಹೋಗೋದು ಗ್ಯಾರಂಟಿ.
Kshetra Samachara
13/12/2020 09:57 am