ಬೆಂಗಳೂರು: ಬಿಬಿಎಂಪಿ ನಿರ್ಲಕ್ಷ್ಯದಿಂದ ಬೆಂಗಳೂರಿಗೆ ಕಂಟಕ ಎದುರಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
ಹೌದು. ಬೆಂಗಳೂರಿನ 8 ವಲಯದಲ್ಲಿ 506 ಜನ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ. 1 ವಾರದಿಂದ 500ಕ್ಕೂ ಹೆಚ್ಚು ಸೋಂಕಿತರು ಕೊರೊನಾ ಪರೀಕ್ಷೆ ವೇಳೆ ಮೊಬೈಲ್ ನಂಬರ್ ಹಾಗೂ ತಪ್ಪು ವಿಳಾಸ ಕೊಟ್ಟಿದ್ದಾರೆ. ನಂತರ ಪಾಸಿಟಿವ್ ಆದವರ ಟ್ರೇಸ್‍ಗೆ ಹೋದಾಗ ಸುಳ್ಳು ಮಾಹಿತಿ ಕೊಟ್ಟಿರುವುದು ಬಹಿರಂಗವಾಗಿದೆ. ಈ ಬೆಳವಣಿಗೆಯು ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಸೋಂಕಿತರನ್ನು ಪರೀಕ್ಷೆ ಮಾಡುವಾಗ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕಿದ್ದ ಬಿಬಿಎಂಪಿ ಇಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸಾಬೀತಾಗಿದೆ. ಸೋಂಕಿತರು ನಗರದಲ್ಲೇ ಇದ್ದಾರ ಅಥವಾ ಬೇರೆ ಹಳ್ಳಿಗಳಿಗೆ ಹೋಗಿದ್ದಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಯಾವ ವಲಯದಲ್ಲಿ ಎಷ್ಟು ಸೋಂಕಿತರು ಮಿಸ್?: ಬೆಂಗಳೂರು ಪೂರ್ವ- 190, ಮಹದೇವಪುರ – 150, ಬೊಮ್ಮನಹಳ್ಳಿ – 88, ಬೆಂಗಳೂರು ಪಶ್ಚಿಮ – 58, ಯಲಹಂಕ – 52, ಆರ್.ಆರ್.ನಗರ – 28, ಬೆಂಗಳೂರು ದಕ್ಷಿಣ-18, ದಾಸರಹಳ್ಳಿ – 7 ಮಂದಿ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ. ಇವರ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ.
PublicNext
05/01/2021 12:11 pm