ಗದಗ: ಅಪ್ರಾಪ್ತೆಗೆ 20 ರೂ. ಆಮಿಷ ತೋರಿಸಿ, ಪಾಳು ಕಟ್ಟಡಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಪ್ರಕರಣ ಸಾಬೀತಾದ ಹಿನ್ನೆಲೆ ನ್ಯಾಯಾಲಯ 25 ವರ್ಷ ಜೈಲು ಶಿಕ್ಷೆ ಹಾಗೂ 8 ಲಕ್ಷ ರೂ. ದಂಡ ಹಾಗೂ ಪರಿಹಾರ ನೀಡುವಂತೆ ಆದೇಶಿಸಿದೆ ಎಂದು ಎಸ್ಪಿ ಶಿವಪ್ರಕಾಶ ಹಾಗೂ ಸರ್ಕಾರಿ ಅಭಿಯೋಜಕ ಅಮರೇಶ್ ಹಿರೇಮಠ ಹೇಳಿದ್ರು.
ಇಂದು ಎಸ್ಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಟಗೇರಿ ಹೊಸಪೇಟ ಚಕ್ ಓಣಿಯ ವೆಂಕಟೇಶ ದೊಡ್ಡಶಿವಪ್ಪ ಶಾವಿ ಎಂಬಾತ ಗಣೇಶ ಚತುರ್ಥಿ ವೇಳೆ ಗೆಳತಿಯರೊಡನೆ ಗಣೇಶ ಮೂರ್ತಿಗಳನ್ನು ನೋಡಲು ಹೋಗಿದ್ದ ವೇಳೆ,12 ವರ್ಷದ ಬಾಲಕಿಗೆ 20 ರೂಪಾಯಿ ನೀಡೋದಾಗಿ ಆಮಿಷ ತೋರಿಸಿ, ಪಾಳು ಬಿದ್ದಿದ್ದ ಕಟ್ಟಡಕ್ಕೆ ಹೊತ್ತೊಯ್ದು ಅತ್ಯಾಚಾರವೆಸಗಿದ್ದ.
ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ 2012 ರಡಿ ಅಪರಾಧದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಸ್ತುತ ಪ್ರಕರಣದಲ್ಲಿ ಸಿಪಿಐ ವೆಂಕಟೇಶ ಯಡಹಳ್ಳಿ ಪ್ರಕರಣ ದಾಖಲಿಸಿಕೊಂಡು,25-10-2019 ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಸಾಕ್ಷಿ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆ ತಪ್ಪಿತಸ್ಥನಿಗೆ 25 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವಾಗಿ ನೊಂದ ಬಾಲಕಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಅಲ್ಲದೆ, ವೈದ್ಯಕೀಯ ವೆಚ್ಚ ಹಾಗೂ ಶೈಕ್ಷಣಿಕ ವೆಚ್ಚ, ಪುನರ್ವಸತಿಗಾಗಿ 7 ಲಕ್ಷ ರೂ. ನೀಡುವಂತೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.
PublicNext
07/10/2022 08:03 pm