ಮಂಗಳೂರು: ನಟಿ, ನಿರೂಪಕಿ ಅನುಶ್ರೀಯವರು ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆಂದು ನಾನು ಹೇಳಿಕೆ ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿರುವುದು ಸಂಪೂರ್ಣ ಸುಳ್ಳು ಎಂದು ಆರೋಪಿ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಇಂದು ಮಂಗಳೂರಿನಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ. ಇದರಿಂದ ಪ್ರಕರಣಕ್ಕೊಂದು ಮಹತ್ತರ ತಿರುವು ದೊರಕಿದಂತಾಗಿದೆ.
ಅನುಶ್ರೀಯವರಿಗೂ ಡ್ರಗ್ಸ್ ಕೇಸ್ ಗೂ ಯಾವುದೇ ಸಂಬಂಧ ಇಲ್ಲ. ನಾವು ಯಾವುದೇ ಡ್ರಗ್ಸ್ ಪಾರ್ಟಿ, ಡ್ರಿಂಕ್ಸ್ ಪಾರ್ಟಿ ಮಾಡಿಲ್ಲ. ಆಕೆ ಅಂತಹ ಹುಡುಗಿಯೂ ಅಲ್ಲ. ನಾನು ಅವರಿಗೆ ಕೇವಲ ಕೊರಿಯೋಗ್ರಾಫ್ ಮಾಡುತ್ತಿದ್ದೆ. ಹೊರತು ಬೇರೆ ಯಾವುದೇ ಸಂಬಂಧವಿಲ್ಲ. ಈಗ ಹಬ್ಬಿರುವ ಸುಳ್ಳು ವಿಚಾರದ ಹಿಂದೆ ಬೇರೆ ಯಾರೋ ಇರಬಹುದು. ನಾನು ಎರಡು ಬಾರಿ ಡ್ರಗ್ಸ್ ತೆಗೆದುಕೊಂಡಿದ್ದೇನೆ. ಈಗ ಪ್ರತಿ ತಿಂಗಳು ಕೋರ್ಟ್ ಗೆ ಹಾಜರಾಗುತ್ತಿದ್ದೇನೆ ಎಂದು ಕಿಶೋರ್ ಅಮನ್ ಶೆಟ್ಟಿ ಹೇಳಿದರು.
ಅನುಶ್ರೀ ಕುಣಿಯೋಣ ಬಾರಾ ಡ್ಯಾನ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಪರಿಚಯ ಆಗಿದ್ದು, 2009ರಲ್ಲಿ ಡ್ಯಾನ್ಸ್ ಗೆ ಕೊರಿಯೋಗ್ರಾಫ್ ಮಾಡಿದ್ದೇ ಅದೇ ಮೊದಲು ಮತ್ತು ಕೊನೆ. ಬಳಿಕ 4-5 ವರ್ಷಗಳ ಹಿಂದೆ ಮಂಗಳೂರಲ್ಲಿ ನಡೆದ ಡ್ಯಾನ್ಸ್ ಕ್ಲಾಸ್ ಕಾರ್ಯಕ್ರಮದಲ್ಲಿ ನಾವು ಭೇಟಿಯಾಗಿದ್ದೆವು. ಬಳಿಕ ನಾವಿಬ್ಬರು ಎಲ್ಲೂ ಭೇಟಿಯಾಗಿಲ್ಲ, ಫೋನ್ ಸಂಪರ್ಕವೂ ಇಲ್ಲ. ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ. ಇದೆಲ್ಲವೂ ಸುಳ್ಳು ಆರೋಪ. ನಾನು ಡ್ರಗ್ಸ್ ಪಾರ್ಟಿಗಳಿಗೆಲ್ಲ ಹೋಗಿಲ್ಲ. ನಾನು ಎರಡು ಬಾರಿ ಡ್ರಗ್ಸ್ ಸೇವನೆ ಮಾಡಿದ್ದೆ. ಆದರೆ ಪೆಡ್ಲಿಂಗ್ ಮಾಡಿಲ್ಲ ಎಂದು ಕಿಶೋರ್ ಶೆಟ್ಟಿ ಹೇಳಿದರು.
PublicNext
08/09/2021 05:09 pm