ನವದೆಹಲಿ: ಖಾಸಗಿ ಕಾಲೇಜಿನ ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಯೊಬ್ಬ ಬೈಕ್ ಸವಾರನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಾರಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬೈಕ್ ಸವಾರನನ್ನು ಶ್ರೇಯಾಂಶ್ (22) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಘಟನೆ ನಡೆದಿದೆ. ಆರೋಪಿ ಹಾಗೂ ಕಾನೂನು ವಿದ್ಯಾರ್ಥಿ ಅನುಜ್ ಚೌಧರಿಯನ್ನು ಬಂಧಿಸಿದ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಅರ್ಜನ್‌ಗಢ್ ಮೆಟ್ರೋ ನಿಲ್ದಾಣವನ್ನು ತಲುಪಿದಾಗ, ರಾಯಲ್ ಎನ್‌ಫೀಲ್ಡ್ ಬುಲೆಟ್ ಕ್ಲಾಸಿಕ್ 350 ಹಾನಿಗೊಳಗಾದ ಸ್ಥಿತಿಯಲ್ಲಿ ಕಂಡುಬಂದಿದೆ ಮತ್ತು ಶ್ರೇಯಾಂಶ್ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾನು ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಅರಾವಳಿಸ್‌ನಲ್ಲಿರುವ ದೇವಸ್ಥಾನಕ್ಕೆ ಹೋಗಿ ಭಾನುವಾರ ಬೆಳಿಗ್ಗೆ ಮನೆಗೆ ಮರಳುತ್ತಿದ್ದೆವು. ಮಾರ್ಗಮಧ್ಯೆ ಸ್ಕಾರ್ಪಿಯೋ ಕಾರಿನ ಚಾಲಕನೊಂದಿಗೆ ಅತಿವೇಗದ ಚಾಲನೆ ಬಗ್ಗೆ ಜಗಳವಾಯಿತು. ಆತ ಅವಾಚ್ಯ ಪದಗಳಿಂದ ನಿಂದಿಸಿದ. ಬಳಿಕ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದು ನನ್ನನ್ನು ಕೆಳಗೆ ಉರುಳಿಸಿದ. ಈ ದೃಶ್ಯವನ್ನು ಬೈಕಿಂಗ್ ಗುಂಪಿನ ಭಾಗವಾಗಿದ್ದ ಯೂಟ್ಯೂಬರ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ ಎಂದು ಶ್ರೇಯಾಂಶ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಮೇರೆಗೆ ಸ್ಕಾರ್ಪಿಯೋ ಕಾರು ಚಾಲಕನ ವಿರುದ್ಧ ಫತೇಪುರ್ ಬೇರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
PublicNext
07/06/2022 08:11 am