ಹೈದರಾಬಾದ್: ಮದುವೆಯಾದ ಮೂರೇ ದಿನದಲ್ಲಿ ನವವಿವಾಹಿತೆಯೊಬ್ಬಳು ದುರಂತ ಅಂತ್ಯ ಕಂಡಿದ್ದು, ಆಕೆಯ ಜೊತೆಗೆ ತಂದೆಯೂ ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮೌನಿಕಾ (25) ಮೃತ ನವವಿವಾಹಿತೆ. ತಂದೆ ರಾಜಯ್ಯ (50) ಕೂಡ ಅಸುನೀಗಿದ್ದಾರೆ. ನಿರ್ಮಲ ಜಿಲ್ಲೆಯ ಕೊಡೆಮ್ ವಲಯದ ಪಾಂಡವಪುರ್ ಬಳಿ ಕಣಿವೆಯೊಂದಕ್ಕೆ ಕಾರು ಉರುಳಿಬಿದ್ದು ದುರಂತ ಸಂಭವಿಸಿದೆ.
ಆಗಸ್ಟ್ 25ರಂದು ಮೌನಿಕಾ ಮದುವೆ ನಡೆದಿತ್ತು. ಮಹಾರಾಷ್ಟ್ರದ ಬಲಹರ್ಷಾದಲ್ಲಿರುವ ವರನ ಮನೆಯಲ್ಲಿ ರಿಸೆಪ್ಷನ್ ಮುಗಿಸಿಕೊಂಡು ಶನಿವಾರ ಬೆಳಗ್ಗೆ ತವರಿಗೆ ಹಿಂದಿರುಗುವಾಗ ಕಾರು ಅಪಘಾತಕ್ಕೀಡಾಗಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ವರ ಜನಾರ್ಧನ್ ಕೂಡ ಅದೇ ಕಾರಿನಲ್ಲಿದ್ದರು. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಕುಟುಂಬದ ಕೆಲವರಿಗೂ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನವವಿವಾಹಿತೆಯನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
PublicNext
29/08/2021 07:39 am