ಬೆಳಗಾವಿ: ರಾಜ್ಯಾದ್ಯಂತ ಇಂದು ಈದ್ ಮಿಲಾದ್ ಹಬ್ಬವನ್ನು ಸರ್ವಧರ್ಮದವರು ಕೂಡಿ ಆಚರಣೆ ಮಾಡ್ತಾರೆ. ಆದರೆ ಈ ಹಬ್ಬದ ದಿನದಂದೇ ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ನಡುವೆ ಜಗಳ ನಡೆದಿದೆ.
ಹೌದು. ಬೈಕ್ ಪಕ್ಕಕ್ಕೆ ತೆಗೆದುಕೊಳ್ಳುವ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ರಾಮದುರ್ಗ ಪಟ್ಟಣದಲ್ಲಿ ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿದು, ಓರ್ವನ ಮೇಲೆ ಹಲ್ಲೆ ನಡೆಸಲಾಗಿದೆ.
ಬೈಕ್ ಪಕ್ಕಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಒಂದು ಕೋಮಿನ ಐದಕ್ಕೂ ಅಧಿಕ ಯುವಕರು ಚಾಕು, ರಾಡ್, ಕಲ್ಲಿನಿಂದ ಶ್ರೀರಾಮಸೇನೆ ಕಾರ್ಯಕರ್ತ ಗೋಪಾಲ್ ಬಂಡಿವಡ್ಡರ್ ಹಾಗೂ ರವಿ ಬಂಡಿವಡ್ಡರ್ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಹೋದ ನಂಜುಡಿ ಸಾಬಣ್ಣ ಬಂಡಿವಡ್ಡರ್ ಮೇಲೆಯೂ ಅಮೀನ್ ಜಂಗಲಶೇಖ್ ಮತ್ತು ಸಹಚರರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯ ಸುದ್ದಿ ತಿಳಿಯುತಿದ್ದಂತೆ ಆಸ್ಪತ್ರೆ ಬಳಿ ಗಾಯಾಳುಗಳ ಸಂಬಂಧಿಕರು ದೌಡಾಯಿಸಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರಾಮದುರ್ಗ ಪೊಲೀಸರು ನಗರದಲ್ಲಿ ಇದೀಗ ಹೈ ಅಲರ್ಟ್ ಆಗಿದ್ದು ನಗರದಲ್ಲಿ ಪೊಲೀಸರು ಗಲ್ಲಿ ಗಲ್ಲಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ.
PublicNext
09/10/2022 06:52 pm