ದೊಡ್ಡಬಳ್ಳಾಪುರ: ಅಂಗನವಾಡಿ ಶಂಕುಸ್ಥಾಪನೆ ಕಾರ್ಯಕ್ರಮ ರಾಜಕೀಯ ಮುಖಂಡರ ವಾಕ್ಸಮರದ ವೇದಿಕೆಯಾಗಿ ಬದಲಾಯಿತು. ಅಭಿವೃದ್ಧಿ ವಿಚಾರ ಬಿಟ್ಟು ಪಕ್ಷಗಳ ಸಮರ್ಥನೆಗೆ ಮುಂದಾದ ನಾಯಕರು ಜನರ ಸಮಸ್ಯೆಗಳಿಗೆ ಧ್ವನಿಯಾಗಲೇ ಇಲ್ಲ!
ದೊಡ್ಡಬಳ್ಳಾಪುರ ನಗರಸಭೆಯ ರಾಜೀವ್ ಗಾಂಧಿ ಬಡಾವಣೆ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಶೂನ್ಯ ಸಾಧನೆ. ಬಡಾವಣೆಯಾಗಿ 20 ವರ್ಷಗಳೇ ಕಳೆದ್ರು ರಸ್ತೆ ಚರಂಡಿ ನಿರ್ಮಾಣವಾಗಿಲ್ಲ. ನಗರಸಭೆಯ ವ್ಯಾಪ್ತಿಯಲ್ಲಿದ್ರೂ ಇಲ್ಲಿನ ಜನರು ಕುಗ್ರಾಮದ ನಿವಾಸಿಗಳಂತೆ ನಿತ್ಯ ಜೀವನ ನಡೆಸುತ್ತಿದ್ದಾರೆ. ಏರಿಯಾ ಅಭಿವೃದ್ಧಿಗೆ ಸ್ಪಂದಿಸದ ಜನಪ್ರತಿನಿಧಿಗಳ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಲು ಇಲ್ಲಿನ ಜನ ಸದಾ ಕಾಯುತ್ತಿದ್ದರು. ಜನರ ಆಕ್ರೋಶದ ಕಟ್ಟೆ ಒಡೆಯಲು ಇಂದು ನಡೆದ ಅಂಗನವಾಡಿ ಶಂಕುಸ್ಥಾಪನೆ ಕಾರ್ಯಕ್ರಮ ನೆಪವಾಗಿತು.
ಕಾರ್ಯಕ್ರಮದಲ್ಲಿ ಶಾಸಕ ಟಿ. ವೆಂಕಟರಮಣಯ್ಯ ಭಾಷಣ ಮಾಡುವ ಸಂದರ್ಭ ಸ್ಥಳೀಯರು ತಮ್ಮ ಸಮಸ್ಯೆ ಬಗ್ಗೆ ಹೇಳಲು ಪ್ರಾರಂಭಿಸಿದರು. ಶಾಸಕರ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಮುಖಂಡರು ಶಾಸಕರ ನಿರ್ಲಕ್ಷ್ಯತೆಯಿಂದ ಏರಿಯಾದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಶಾಸಕರ 9 ವರ್ಷಗಳ ಅವಧಿಯಲ್ಲಿ ಯಾವುದೇ ಅನುದಾನ ನೀಡಿಲ್ಲವೆಂದು ಕಾಂಗ್ರೆಸ್ ಶಾಸಕರಿಗೆ ಮುಗಿಬಿದ್ದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರನ್ನು ಮುತ್ತಿಗೆ ಹಾಕಿದ ಬಿಜೆಪಿ ನಗರಸಭಾ ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದರಿಂದ ಕೆರಳಿದ ಕಾಂಗ್ರೆಸ್ ನಗರಸಭಾ ಸದಸ್ಯರು ಕೇಂದ್ರದಲ್ಲೂ ನಿಮ್ಮದೇ ಸರ್ಕಾರ. ರಾಜ್ಯದಲ್ಲೂ ನಿಮ್ಮದೇ ಸರ್ಕಾರ, ಜೊತೆಗೆ ನಗರಸಭೆಯಲ್ಲೂ ನಿಮ್ಮ ಪಕ್ಷದವರೇ ಅಧ್ಯಕ್ಷರಾಗಿದ್ದಾರೆ. ತ್ರಿಬಲ್ ಇಂಜಿನ್ ಸರ್ಕಾರ ಇರುವಾಗ ಅನುದಾನ ತಂದು ಅಭಿವೃದ್ಧಿ ಮಾಡುವ ಬದಲಿಗೆ ಶಾಸಕರನ್ನು ದೂರುವುದು ಯಾವ ನ್ಯಾಯ? ಎಂದರು.
ಹೀಗೆ ಬಿಜೆಪಿ- ಕಾಂಗ್ರೆಸ್ ಜನಪ್ರತಿನಿಧಿಗಳು ತಮ್ಮ ತಮ್ಮ ಪಕ್ಷಗಳ ಪರವಾಗಿ ಕಿತ್ತಾಡಿದರೇ ಹೊರತು, ಅಭಿವೃದ್ಧಿ ವಿಚಾರಕ್ಕೆ ಒಂದಾಗಿ ಸರ್ಕಾರದಿಂದ ಅನುದಾನ ತಂದಿದ್ದರೆ ಜನರು ಇಷ್ಟೊಂದು ಬವಣೆ ಪಡಬೇಕಾಗಿರಲಿಲ್ಲ.
Kshetra Samachara
11/08/2022 02:57 pm