ವರದಿ: ಬಲರಾಮ್ ವಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದು, ನಿನ್ನೆ ರಾತ್ರಿ ಸುರಿದ ಹಲವೆಡೆ 12 ಸೆಂಟಿಮೀಟರ್ ಗಿಂತಲೂ ಅಧಿಕ ಮಳೆಯಾಗಿದೆ. ಇದರಿಂದಾಗಿ ವಾಹನ ಸವಾರರು, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.
ಹಲವೆಡೆ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡಿ ನಿದ್ದೆ ಮಾಡದೇ ಮನೆಯೊಳಗೆ ಬಂದ ನೀರನ್ನ ಹೊರಹಾಕುತ್ತಾ ಜನ ಹೈರಣಾಗಿದ್ದಾರೆ.
ನಿನ್ನೆ ಸುರಿದ ಭಾರಿ ಮಳೆಗೆ ಬೆಂಗಳೂರು ನಗರದ ಹೊರಮಾವು ವಾರ್ಡ್ ನ ಸಾಯಿ ಬಡಾವಣೆ ಮತ್ತು ವಡ್ಡರಪಾಳ್ಯದಲ್ಲಿ ಮೂರು ಅಡಿಗೂ ಹೆಚ್ಚು ನೀರು ತುಂಬಿಕೊಂಡಿದ್ದು,ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ನೀರು ತುಂಬಿಕೊಂಡಿದೆ. ಮಳೆ ನೀರಿನಿಂದ ಪರದಾಡಿದ ಬಡಾವಣೆಯ ನಿವಾಸಿಗಳು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ವಡ್ಡರಪಾಳ್ಯ ಮತ್ತು ಶ್ರೀ ಸಾಯಿ ಬಡಾವಣೆಯಲ್ಲಿ ನೀರು ನುಗ್ಗಿ ಅವಾಂತರ ತಿಳಿದ ಸಚಿವ ಬೈರತಿ ಬಸವರಾಜ್ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಮೇಲೆ ನಿಂತ ನೀರಿಗಿಳಿದು ಪರಿಶೀಲನೆ ನಡೆಸಿದರು.ಸಮಸ್ಯೆಗೆ ತುತ್ತಾದ ಜನರ ಸಮಸ್ಯೆಗಳನ್ನ ಆಲಿಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿ ಸಚಿವ ಬೈರತಿ ಬಸವರಾಜ್, ಮಳೆ ನೀರಿನಿಂದಾಗಿ ಈ ಭಾಗದಲ್ಲಿ ಸಮಸ್ಯೆ ಆಗಿದೆ, ಹೆಚ್ಚು ಮಳೆ ಬಂದಿದ್ದರಿಂದ ಸಮಸ್ಯೆ ಆಗಿದೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರವಾಗಿ ಕೆಲಸ ಆರಂಭಿಸಿ ಫೆಬ್ರವರಿ ಅಂತ್ಯಕ್ಕೆ ಶಾಶ್ವತ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಮುಖ್ಯಮಂತ್ರಿಗಳು 25 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ.ಈ ಬಡಾವಣೆಯಲ್ಲಿ ಯಾವುದೇ ಸಮಸ್ಯೆ ಆಗಿದ್ದರೆ ಹಾಗೂ ಮನೆಗೆಳಿಗೆ ಹಾನಿಯಾಗಿದ್ದರೆ ತಕ್ಷಣ ಅವರಿಗೆ ಸರ್ಕಾರದಿಂದ ಬರುವ ಪರಿಹಾರವನ್ನ ಕೊಡಿಸುವ ಕೆಲಸ ಮಾಡಲಾಗುತ್ತೆ ಎಂದರು.
PublicNext
19/05/2022 08:28 am