ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನದ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರತಿಭಟನೆ ನಡೆಸಿತು.
ಪಿಎಸ್ಐ ನೇಮಕಾತಿಹಗರಣದಿಂದ ಸಾವಿರಾರು ಪ್ರಾಮಾಣಿಕ ಅಭ್ಯರ್ಥಿಗಳು ಇಂದು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಪ್ರಾಮಾಣಿಕರಿಗೆ ಸಹಕರಿಸುವ ಮನೋಭಾವ ಬಿಜೆಪಿ ಸರ್ಕಾರ ತೋರುತ್ತಿಲ್ಲ. ಆದ್ದರಿಂದ ಈ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಕಾರ್ಯ ಬಿಜೆಪಿ ಸರ್ಕಾರದಿಂದ ನಡೆಯುತ್ತಿದೆ.
ದಿವ್ಯಾ ಹಾಗರಗಿ ಮಾಲೀಕತ್ವದ ವಿದ್ಯಾಸಂಸ್ಥೆಯ ಮೂಲಕ ಭ್ರಷ್ಟಾಚಾರ ನಡೆದಿರುವುದು ಬಹಿರಂಗವಾಗಿದೆ. ಆದರೂ ಕೇವಲ ಭಾವಚಿತ್ರದ ಮೂಲಕ ಬಿಜೆಪಿ ಪಕ್ಷ ರಾಜಕೀಯ ಲಾಭ ಪಡೆಯಲು ಹಾಗೂ ತನಿಖೆಯ ವಿಧಾನವನ್ನು ಬದಲಾಯಿಸಲು ಮುಂದಾಗಿದೆ.
ಈ ಹಿನ್ನಲೆಯಲ್ಲಿ ಕೂಡಲೇ ನಿಷ್ಪಕ್ಷ ಪಾತ ತನಿಖೆಗೆ ಸಹಕರಿಸಲು ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಇಂದು ಕಾಂಗ್ರೆಸ್ ಭವನ ಮುಂಭಾಗದಲ್ಲಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಅಲ್ಲದೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಸರ್ಕಾರ ಕೂಡಲೇ ಅವರ ರಕ್ಷಣೆಗೆ ಧಾವಿಸಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರವನ್ನು ಆಗ್ರಹಪಡಿಸಿದರು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರಾದ ಎಸ್.ಮನೋಹರ್ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
PublicNext
29/04/2022 03:18 pm