ಬೆಂಗಳೂರು: ನಗರದಲ್ಲಿ 2016 ರ ನಂತರ ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆದು ಉಲ್ಲಂಘಿಸಿದ ಹಾಗೂ ನಕ್ಷೆ ಪಡೆಯದೇ ನಿರ್ಮಿಸಲಾದ 1.97 ಲಕ್ಷ ಅನಧಿಕೃತ ಕಟ್ಟಡಗಳನ್ನು ಬಿಬಿಎಂಪಿ ಅಧಿಕಾರಿಗಳು ಸಮೀಕ್ಷೆಯಿಂದ ಪತ್ತೆ ಮಾಡಿದ್ದಾರೆ. ಉಚ್ಛ ನ್ಯಾಯಾಲಯ ನಿರ್ದೇಶನದ ಅನ್ವಯ ಬಿಬಿಎಂಪಿ ನಗರ ಯೋಜನೆ ಮತ್ತು ಕಂದಾಯ ವಿಭಾಗದ ಅಧಿಕಾರಿಗಳಿಂದ ಜಂಟಿಯಾಗಿ ಅನಧಿಕೃತ ಕಟ್ಟಡಗಳ ಸಮೀಕ್ಷೆ ಮಾಡಲಾಗುತ್ತಿದೆ.
ಸಮೀಕ್ಷಾ ಕಾರ್ಯ ನಿಧಾನವಾಗ್ತಿದ್ದ ಹಿನ್ನೆಲೆಯಲ್ಲಿ ಅಕ್ರಮ ಕಟ್ಟಡಗಳ ತೆರವಿಗೆ 100 ವರ್ಷ ಬೇಕೇ ಎಂದು ಹೈಕೋರ್ಟ್ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ವೇಳೆ ನ್ಯಾಯಾಲಯಕ್ಕೆ ನೀಡಿದ ವರದಿ ಅನುಸಾರ 1.97 ಲಕ್ಷ ಅನಧಿಕೃತ ಕಟ್ಟಡಗಳನ್ನು ಗುರುತಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮತ್ತೊಂದೆಡೆ, ಹೈಕೋರ್ಟ್ ತರಾಟೆ ಬೆನ್ನಲ್ಲೇ ಮುಖ್ಯ ಆಯುಕ್ತರು ತರಾತುರಿಯಲ್ಲಿ ಸಭೆಯೊಂದನ್ನು ನಡೆಸಿ, ಬಾಕಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲು ಖಡಕ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 2 ರೀತಿ ಅಕ್ರಮ ಕಟ್ಟಡಗಳನ್ನು ಗುರುತಿಸಲಾಗುತ್ತಿದೆ. ಮೊದಲನೆಯದಾಗಿ ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆದು, ನಂತರ ಕಟ್ಟಡ ನಿರ್ಮಿಸುವಾಗ ಅದನ್ನು ಉಲ್ಲಂಘನೆ ಮಾಡಿರುವುದು. ಒಟ್ಟು 2016ರಿಂದ ಪಾಲಿಕೆಯಿಂದ 57,432 ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿದೆ. ಅದರಲ್ಲಿ ಈವರೆಗೆ 36,759 ಕಟ್ಟಡಗಳನ್ನು ಸಮೀಕ್ಷೆ ಮಾಡಿದ್ದು, ಈ ಪೈಕಿ 16,086 ಕಟ್ಟಗಳಲ್ಲಿ ನಕ್ಷೆ ಉಲ್ಲಂಘನೆ ಪತ್ತೆಯಾಗಿದೆ. 20,673 ಕಟ್ಟಡಗಳ ಸಮೀಕ್ಷೆ ಕಾರ್ಯ ಬಾಕಿಯಿದೆ.
ಎರಡನೆಯದಾಗಿ ಬಿಬಿಎಂಪಿ ವತಿಯಿಂದ ನಕ್ಷೆ ಮಂಜೂರಾತಿ ಸೇರಿ ಯಾವುದೇ ಅನುಮತಿ ಪಡೆಯದೆ 1,81,236 ಕಟ್ಟಡಗಳು ನಿರ್ಮಾಣವಾಗಿರುವುದನ್ನು ಗುರುತಿಸಲಾಗಿದೆ. ಇಂತಹ ಬಹುತೇಕ ಕಟ್ಟಡಗಳು ‘ಬಿ’ ಖಾತೆಯ ಆಸ್ತಿಯಲ್ಲಿ ನಿರ್ಮಾಣಗೊಂಡಿವೆ. ಆದರೆ ‘ಬಿ’ ಖಾತೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವಿದ್ದು, ಅದು ಇತ್ಯರ್ಥವಾದ ನಂತರ ತೀರ್ಪನ್ನು ಆಧರಿಸಿ ಅಕ್ರಮ ಕಟ್ಟಡ ತೆರವು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಅಧಿಕಾರಿ ತಿಳಿಸಿದರು.
Kshetra Samachara
08/06/2022 06:46 pm