ವಿಶೇಷ ವರದಿ: ಗಣೇಶ್ ಹೆಗಡೆ
ಬೆಂಗಳೂರು: ಬಿಬಿಎಂಪಿ ಅಂಗಳದಲ್ಲಿ ಮತ್ತೊಂದು ಹಗರಣ ಸದ್ದು ಮಾಡಿದೆ. ಕೆಲ ತಿಂಗಳ ಹಿಂದಷ್ಟೇ ಸದ್ದು ಮಾಡಿದ್ದ “ಸ್ವೆಟರ್ಸ್ ಹಗರಣ” ಬಿಬಿಎಂಪಿ ಮಾನ ಹರಾಜು ಹಾಕಿತ್ತು. ಅದಾದ ಕೆಲವೇ ತಿಂಗಳ ಬಳಿಕ, ಚರ್ಚೆಗೆ ಮತ್ತೊಂದು ವೇದಿಕೆ ಸೃಷ್ಟಿಸಿದೆ. ಈ ಹಗರಣವೂ ಶಿಕ್ಷಣ ಕೋಶಕ್ಕೆ ಸಂಬಂಧಿಸಿದೆ ಎನ್ನುವುದು ವಿಪರ್ಯಾಸ.
ಕಳಪೆ ಗುಣಮಟ್ಟದ ಸ್ಕೂಲ್ ಬ್ಯಾಗ್ ಗಳನ್ನು ಮಕ್ಕಳಿಗೆ ಪೂರೈಕೆ ಮಾಡಿ, ಗುತ್ತಿಗೆದಾರನಿಂದ ದೊಡ್ಡ ಪ್ರಮಾಣದ ಕಿಕ್ ಬ್ಯಾಕ್ ಪಡೆಯಲು ಶಿಕ್ಷಣ ಕೋಶದ ಅಧಿಕಾರಿಗಳು ನಡೆಸಿರ ಬಹುದೆನ್ನಲಾಗುತ್ತಿರುವ ಹುನ್ನಾರ ಕೊನೆಗೂ ಬಟಾಬಯಲಾಗಿದೆ!
90 ಲಕ್ಷದ 28 ಸಾವಿರದ 674 ರೂ. ಮೊತ್ತದ ಪೂರೈಕೆಯ ಟೆಂಡರ್ ಇದು. ಪ್ರಾಥಮಿಕ ಶಾಲೆಯ 3253 ಮಕ್ಕಳಿಗೆ 490 ರೂ. ದರದಲ್ಲಿ 15,93,970 ರೂ. ಮೌಲ್ಯದ ಬ್ಯಾಗ್ , ಪ್ರೌಢಶಾಲೆಯ 7153 ಮಕ್ಕಳಿಗೆ 458 ರೂ. ದರದಲ್ಲಿ 32,76,074 ರೂ. ಮೌಲ್ಯದ ಬ್ಯಾಗ್, ಪದವಿಪೂರ್ವ ಕಾಲೇಜಿನ 7084 ಮಕ್ಕಳಿಗೆ 490 ರೂ. ದರದಲ್ಲಿ 34,71,160 ಮೌಲ್ಯದ ಬ್ಯಾಗ್ ಹಾಗೂ ಪದವಿ ಕಾಲೇಜುಗಳ 1403 ಮಕ್ಕಳಿಗೆ 490 ರೂ. ದರದಲ್ಲಿ 6,87,470 ರೂ. ಮೌಲ್ಯ ಹೀಗೆ ಒಟ್ಟು 18,893 ಮಕ್ಕಳಿಗೆ 90,28,674 ಮೌಲ್ಯದ ಬ್ಯಾಗ್ ಗಳನ್ನು ವಿತರಿಸುವ ಗುತ್ತಿಗೆಯನ್ನು ಮಾರುತಿ ಎಂಟರ್ ಪ್ರೈಸಸ್ ಅವರಿಗೆ ನೀಡಲಾಗಿತ್ತು.
ಆದರೆ, ಮಾರುತಿ ಎಂಟರ್ ಪ್ರೈಸಸ್ ನವರು ಕಳಪೆ ಗುಣಮಟ್ಟದ ಬ್ಯಾಗ್ ಗಳನ್ನು ವಿತರಿಸುವ ಮೂಲಕ ಅಕ್ರಮಕ್ಕೆ ಎಡೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
PublicNext
06/03/2022 06:37 pm