ಬೆಂಗಳೂರು: ಇಂದಿನಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರಾರಂಭವಾಗಿರುವ ದೇಶದ ವಿವಿಧ ಭಾಗಗಳ ಕಲಾವಿದರ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಬೆಂಗಳೂರು ಆರ್ಟ್ಸ್ & ಕ್ರಾಫ್ಟ್ ಮೇಳಕ್ಕೆ ನಟಿಯರಾದ ಸಿಂಧೂ ಗೌಡ ಮತ್ತು ನಿಧಿ ರಾವ್ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ನಟಿ ಸಿಂಧೂ ಗೌಡ ಮಾತನಾಡಿ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಕರಕುಶಲಕರ್ಮಿಗಳು ನಿರ್ಮಿಸಿರುವ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳನ್ನು ಒಂದೇ ವೇದಿಕೆಯಲ್ಲಿ ಕೊಳ್ಳುವ ಅವಕಾಶ ಇಲ್ಲಿ ನಿರ್ಮಿಸಲಾಗಿದೆ. ಕಲಾವಿದರು ಮತ್ತು ಕರಕುಶಕರ್ಮಿಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಆಯೋಜಕರಾದ ಅಫ್ತಾಬ್ ಮಾತನಾಡಿ, ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಪ್ರವೇಶ ಉಚಿತವಾಗಿದೆ. 80 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ನಿಮ್ಮ ಮನೆಯ ಗಾರ್ಡನ್ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್ ಲೂಮ್ ಸ್ಯಾರಿಯನ್ನು ಸೆಲೆಕ್ಟ್ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ ಎಂದು ಹೇಳಿದರು.
ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ. ಮೇ.15ರವರೆಗೆ ಕರಕುಶಲ ಪ್ರದರ್ಶನ ಜರುಗಲಿದೆ.
Kshetra Samachara
06/05/2022 05:16 pm