ಬೆಂಗಳೂರು:ನಗರದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಜನರು ಹೈರಾಣಾಗಿದ್ದು,ಕೆಆರ್ ಪುರದ ಹಲವೆಡೆ ಬೃಹತ್ ಮರ, ವಿದ್ಯುತ್ ಕಂಬಗಳು ನೆಲಕ್ಕರುಳಿ ಸಾರ್ವಜನಿಕರು, ವಾಹನ ಸವಾರರು ಪರಿತಪಿಸುತ್ತಿದ್ದಾರೆ.
ರಾಮಮೂರ್ತಿನಗರದ ಅಕ್ಷಯನಗರ ಮುಖ್ಯರಸ್ತೆಯಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬುಡ ಸಮೇತ ಅಂಗಡಿಯೊಂದರ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದೇ ರಸ್ತೆಯಲ್ಲಿ ಎರಡು ವಿದ್ಯುತ್ ಕಂಬಗಳು ಸಹ ಧರೆಗುರುಳಿದ್ದು, ಸುತ್ತಮುತ್ತಲ ಭಾಗದ ಜನರು ರಾತ್ರಿಯಿಡಿ ವಿದ್ಯುತ್ ಇಲ್ಲದೇ ಪರಿತಪಿಸುವಂತಾಯಿತು.ಬೆಳಗಿನ ಜಾವದ ವರೆಗೂ ಮರದ ತೆರವು ಕಾರ್ಯ ನಡೆಯಲಿಲ್ಲ. ನಂತರ ಪಾಲಿಕೆಯ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು. ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲಮಾಡಿಕೊಟ್ಟರು.
ಇನ್ನು ಟಿನ್ ಫ್ಯಾಕ್ಟರಿ ಸಮೀಪದ ವಿಜಿನಾಪುರದಲ್ಲಿರುವ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿ ವಾಹನ ಸವಾರರು ಹರಸಾಹಸಪಟ್ಟರು. ವಿಜಿನಾಪುರ ಭಾಗದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ಇದಾಗಿದ್ದು, ಆರು ಅಡಿಗೂ ಹೆಚ್ಚು ನೀರು ನಿಂತಿದ್ದು ವಾಹನಗಳು ಸಂಪೂರ್ಣ ಮುಳುಗಿ ಹೋಗುತ್ತಿದ್ದವು. ಅವೈಜ್ಞಾನಿಕವಾಗಿ ಅಂಡರ್‌ಪಾಸ್ ನಿರ್ಮಾಣ ಮಾಡಿರುವುದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಎಂದು ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.
Kshetra Samachara
19/11/2021 08:05 pm