ನೆಲಮಂಗಲ: ನೆಲಮಂಗಲ ತಾಲ್ಲೂಕು ನರಸೀಪುರ ಹೋಬಳಿಯ ಕೆರೆಪಾಳ್ಯ ಗ್ರಾಮದಲ್ಲಿ ನೆಲಮಂಗಲ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಮುಂಜಾನೆ ಹೆಣ್ಣು ಚಿರತೆಯೊಂದು ಬಿದ್ದಿದೆ.
ಕಳೆದ 10 ದಿನಗಳ ಹಿಂದೆ ನರಸೀಪುರದ ಕೆರೆಪಾಳ್ಯದ ಬಂಡೆಯ ಮೇಲೆ ಚಿರತೆಯೊಂದು ಪ್ರತ್ಯಕ್ಷಗೊಂಡ ಬೆನ್ನಲ್ಲೆ ಕೆರೆಪಾಳ್ಯ ಗ್ರಾಮಸ್ಥರು ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ ಹಿನ್ನಲೆ ಬೋನಿಡಲಾಗಿತ್ತು. ಇಂದು ಮುಂಜಾನೆ ಬೋನಿಗೆ ಸುಮಾರು 5-6 ವರ್ಷದ ಹೆಣ್ಣು ಚಿರತೆ ಬಿದ್ದುದ್ದನ್ನ ಕಂಡ ಗ್ರಾಮಸ್ಥರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ವೈದ್ಯರ ತಂಡ ಭೇಟಿ ನೀಡಿ ಚಿರತೆಯನ್ನ ಪರೀಕ್ಷಿಸಿ , ಆರೋಗ್ಯದಿಂದಿರುವ ಹೆಣ್ಣು ಚಿರತೆಯನ್ನ ಬನ್ನೇರುಘಟ್ಟ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದರು. ಚಿರತೆ ಉಪಟಳಕ್ಕೆ ನಲುಗಿದ್ದ ಗ್ರಾಮಸ್ಥರು ಈ ಚಿರತೆ ಸೆರೆಯಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಅಲ್ಲದೇ ನಿನ್ನೆ ಸಂಜೆಯೂ ಕೂಡ ನೆಲಮಂಗಲ ತಾಲ್ಲೂಕಿನ ಅರೆಬೊಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಲಕೂರು ಗ್ರಾಮದ ರಸ್ತೆಯಲ್ಲಿ ರಾತ್ರಿ ಸುಮಾರು 8.30 ರ ವೇಳೆಯಲ್ಲಿ ನಾಲ್ಕು ಚಿರತೆಗಳು ಗ್ರಾಮಸ್ಥರಿಗೆ ಕಾಣಿಸಿಕೊಂಡಿದೆ. ಚಿರತೆ ಚಲನವಲನದ ದೃಶ್ಯಗಳನ್ನ ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್ನಲ್ಲಿ ಕ್ಲಿಕ್ಕಿಸಿಕೊಂಡಿದ್ದು, ಅಲಕೂರು ಕಡೆಯಿಂದ ತಾಳೆಕೆರೆ ಗ್ರಾಮದ ಕಡೆಗೆ ಚಿರತೆಗಳು ಸಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
PublicNext
07/12/2024 03:42 pm