ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ನೀರುಗಾಲುವೆಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುವ ಪ್ರದೇಶಗಳ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದ್ದು, ಅದರಂತೆ ಇಂದು 7 ಕಡೆ ಒತ್ತುವರಿ ತೆರವುಗೊಳಿಸಲಾಗಿದೆ.
ಯಲಹಂಕ ವಲಯ ವಿದ್ಯಾರಣ್ಯಪುರ ವಾರ್ಡ್ ನ ಬಸವ ಸಮಿತಿ ಲೇಔಟ್ ವ್ಯಾಪ್ತಿಯಲ್ಲಿ ಮಳೆ ನೀರುಗಾಲುವೆ ಮೇಲೆ ಬೇರೆ ಬೇರೆ ಸ್ಥಳದಲ್ಲಿ 195 ಅಡಿ ಉದ್ದದಷ್ಟು ಮನೆ ಕಾಂಪೌಂಡ್ ಗೋಡೆ ಹಾಗೂ ಖಾಲಿ ಸೈಟ್‌ನ ಕಾಂಪೌಂಡ್ ಗೋಡೆ ತೆರವುಗೊಳಿಸಲಾಯಿತು.
ಬೊಮ್ಮನಹಳ್ಳಿ ವಲಯ ಅಂಜನಾಪುರ ವಾರ್ಡ್ ನ 60 ಅಡಿ ರಸ್ತೆ ಬಳಿ 2 ಗುಂಟೆ ಮಳೆ ನೀರುಗಾಲುವೆಯ ಖಾಲಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ. ವಸಂತಪುರ ವಾರ್ಡ್ ಸತ್ಯಮ್ಮನ ಕುಂಟೆಯಲ್ಲಿ 35 ಮೀಟರ್ ಉದ್ದದ ಕಾಂಪೌಂಡ್ ಗೋಡೆ ತೆರವುಗೊಳಿಸಲಾಗಿದೆ ಹಾಗೂ 4 ಗುಂಟೆ ಮಳೆ ನೀರುಗಾಲುವೆಯ ಖಾಲಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ.
ಮಂಗಮ್ಮನ ಪಾಳ್ಯದ ರಸ್ತೆ ಬದಿಯ ಮಳೆ ನೀರುಗಾಲುವೆಯ ಮೇಲೆ ಅಳವಡಿಸಲಾಗಿದ್ದ ತಾತ್ಕಾಲಿಕ ಶೆಡ್ ರೂಫ್ ಗಳನ್ನು ತೆರವುಗೊಳಿಸಿ ಮತ್ತೊಮ್ಮೆ ಒತ್ತುವರಿ ಮಾಡದಂತೆ ಮಳಿಗೆಯ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.
ರಾಜರಾಜೇಶ್ವರಿ ನಗರ ವಲಯ ಲಿಂಗಧೀರನಹಳ್ಳಿಯ ನಾಟಕದ ಚೆನ್ನಪ್ಪ ಬಡಾವಣೆಯ ಖಾಲಿ ಜಾಗದ 15 ಅಡಿ ಉದ್ದ ಹಾಗೂ 6 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.
ದಾಸರಹಳ್ಳಿ ವಲಯ ಹೆಗ್ಗನಹಳ್ಳಿ ವಾರ್ಡ್ ಭೈರವೇಶ್ವರ ಇಂಡಸ್ಟ್ರಿಯಲ್ ಎಸ್ಟೇಟ್ ನವರು ರಾಜಕಾಲುವೆಯ ಮೇಲೆ 17 ಮೀಟರ್ ಉದ್ದ, 8 ಅಡಿ ಎತ್ತರದ ತಡೆಗೋಡೆ ನಿರ್ಮಿಸಿದ್ದು, ಈ ತಡೆಗೋಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಜೊತೆಗೆ 20 ಚದರ ಅಡಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ.
ಮಹದೇವಪುರ ವಲಯ ವರ್ತೂರು ಕೋಡಿ ಬಳಿಯ 10 ಮೀಟರ್ ಅಗಲದ ಮಳೆ ನೀರುಗಾಲುವೆ ಪೈಕಿ 2 ಮೀಟರ್ ಜಾಗದಲ್ಲಿ ಮನೆ ಕಾಂಪೌಂಡ್ ಗೋಡೆ, ಉಳಿದ 8 ಮೀಟರ್ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಸ್ಥಳದಲ್ಲಿ 300 ಮೀಟರ್ ಮಳೆ ನೀರುಗಾಲುವೆಯ ಒತ್ತುವರಿ ಪೈಕಿ ಇದುವರೆಗೆ 70 ಮೀಟರ್ ನಷ್ಟು ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಪೂರ್ವ ವಲಯದ ಇಂದಿರಾ ನಗರ 80 ಅಡಿ ರಸ್ತೆ(ಬಿಎಸ್ ಎನ್ಎಲ್ ಕಚೇರಿ ಹತ್ತಿರ) ಮಳೆನೀರು ಕಾಲುವೆ ಮೇಲೆ ಅಳವಡಿಸಿದ್ದ 5 ಮೀಟರ್ ಉದ್ದದ ಸ್ಲ್ಯಾಬ್ ತೆರವುಗೊಳಿಸಲಾಗಿದೆ.
PublicNext
03/09/2022 09:12 pm