ಬೆಂಗಳೂರು: ಬೆಂಗಳೂರು ಉಪನಗರ ರೈಲು ಬೆಂಗಳೂರಿಗರ ಬಹುನಿರೀಕ್ಷಿತ ಯೋಜನೆ. ಹಲವು ಡೆಡ್‌ಲೈನ್, ವಿಳಂಬಗಳ ಬಳಿಕ ಕೊನೆಗೂ ಯೋಜನೆಗೆ ಕಾಮಗಾರಿ ಆರಂಭವಾಗುವ ಲಕ್ಷಣ ಕಾಣುತ್ತಿದೆ. ಪ್ರಧಾನಿ ನರೇಂದ್ರ ಇದೇ ತಿಂಗಳು ರಾಜ್ಯ ಪ್ರವಾಸ ಮಾಡುತ್ತಿದ್ದು, ಉಪ ನಗರ ಯೋಜನೆಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.
ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಾಲ (20:20:60 ಅನುಪಾತ) ವೆಚ್ಚ ಪಾಲುದಾರಿಕೆಯಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಗೆ ಕರ್ನಾಟಕ ಸರ್ಕಾರ 5,087 ಕೋಟಿ ರೂ. ಭಾರತ ಸರ್ಕಾರ 3,242 ಕೋಟಿ ಹಾಗೂ ಸಾಲದ ಮೂಲಕ 7,438 ಕೋಟಿ ರೂ. ಭರಿಸಲಿದೆ. 148.17 ಕಿ.ಮೀ. ಉದ್ದದ ಉಪನಗರ ರೈಲ್ವೇ ಯೋಜನೆಯನ್ನು ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಜಂಟಿ ಸಹಭಾಗಿತ್ವ ಸಂಸ್ಥೆಯಾದ ಕೆ-ರೈಡ್ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ.
ಉಪನಗರ ರೈಲು ಯೋಜನೆಯಲ್ಲಿ ಒಟ್ಟು ನಾಲ್ಕು ಕಾರಿಡಾರ್ಗಳನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರು- ದೇವನಹಳ್ಳಿ (41.40 ಕಿ.ಮೀ), ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿ-ಬೆಂಗಳೂರು ಕಂಟೋನ್ಮೆಂಟ್ (35.52 ಕಿ.ಮೀ.) ಮತ್ತು ಹೀಲಲಿಗೆ-ರಾಜಾನುಕುಂಟೆ (46.24 ಕಿ.ಮೀ) ನಾಲ್ಕು ಕಾರಿಡಾರ್ನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಕಾರಿಡಾರ್-2 ಬೈಯಪ್ಪನಹಳ್ಳಿ ಚಿಕ್ಕಬಾಣವಾರ (25.01 ಕಿ.ಮೀ.) ಕಾಮಗಾರಿಯ ಪೂರ್ವ ಸಿದ್ಧತಾ ಕಾಮಗಾರಿಯ ಕೆಲಸಗಳು ಪೂರ್ಣಗೊಂಡಿದೆ. ಸಿವಿಲ್ ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದ್ದು, ಎಲ್ ಅಂಡ್ ಟಿ ಸಂಸ್ಥೆ ಕನಿಷ್ಠ ದರ ನಿಗದಿಗೊಳಿಸಿದ ಬಿಡ್ಡರ್ ಆಗಿ ಹೊರ ಹೊಮ್ಮಿದೆ. ಆದರೆ ಇನ್ನೂ ಕಾರ್ಯಾದೇಶ ಹೊರಡಿಸುವುದು ಬಾಕಿ ಇದೆ. ಎಲ್ ಆ್ಯಂಡ್ ಟಿ ಸಂಸ್ಥೆ 849 ಕೋಟಿ ರೂ. ಟೆಂಡರ್ ದರ ನಿಗದಿ ಮಾಡಿದೆ. ಈ ಒಂದು ಕಾರಿಡಾರ್ ಕಾಮಗಾರಿ ಸ್ವಲ್ಪ ಹೆಚ್ಚು ಪ್ರಗತಿ ಕಂಡಿದ್ದರೆ, ಉಳಿದ ಕಾರಿಡಾರ್ ಕಾಮಗಾರಿ ಪ್ರಗತಿ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ. ಇದೇ ಕಾರಿಡಾರ್ ಕಾಮಗಾರಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
ಆದರೆ, ಉಳಿದ ಮೂರು ಕಾರಿಡಾರ್‌ಗಳ ಕಾಮಗಾರಿಗಳ ಪೂರ್ವಸಿದ್ಧತಾ ಕೆಲಸಗಳೇ ಇನ್ನೂ ಪ್ರಗತಿಯಲ್ಲಿದೆ. ಹಂತ ಹಂತವಾಗಿ ಟೆಂಡರ್ಗಳನ್ನು ಕರೆಯಲಾಗುತ್ತಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಸ್ವಾಧೀನಕ್ಕಾಗಿ 1,419 ಕೋ ಟಿ ರೂ. ವೆಚ್ಚವಾಗಲಿದೆ. 2026 ರಲ್ಲಿ ಯೋಜನೆಯನ್ನು ಪೂರ್ಣ ಗೊಳಿಸುವ ಗುರಿ ಹೊಂದಲಾಗಿದೆ.
PublicNext
14/06/2022 10:52 pm