ಬೆಂಗಳೂರು: ನಮ್ಮ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಮತ್ತೆ ಪ್ರಾರಂಭವಾಗಿದೆ. ಕಳೆದ ವಾರ ಭಾರಿ ಮಳೆಯಿಂದ ಗುಂಡಿ ಮುಚ್ಚುವ ಕಾರ್ಯ ತಾತ್ಕಾಲಿಕ ಸ್ಥಗಿತವಾಗಿತ್ತು. ಇದೀಗ ಮಳೆ ನಿಂತ ಹಿನ್ನೆಲೆಯಲ್ಲಿ ಆರಂಭವಾಗಿದ್ದು, 11,092 ರಸ್ತೆ ಗುಂಡಿಗಳನ್ನು ಗುರುತಿಸಿದ್ದು, ಇದರಲ್ಲಿ 5,119 ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಅವರು, ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‌ನಲ್ಲಿ ದೂರು ದಾಖಲಾದ ಒಂದು ವಾರದೊಳಗೆ ರಸ್ತೆಗುಂಡಿ ಮುಚ್ಚಲಾಗುವುದು. ಪೂರ್ವ ಮುಂಗಾರು ಮಳೆಯಿಂದ ನಗರದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಜೂನ್‌ನಿಂದ ಮುಂಗಾರು ಮಳೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಮನೆಗಳಿಗೆ ನೀರು ನುಗ್ಗಿ ತೊಂದರೆಯಾದರೆ ಜನರನ್ನು ತಾತ್ಕಾಲಿಕ ಶೆಲ್ಟರ್, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಸ್ಥಳಗಳನ್ನು ಗುರುತಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
Kshetra Samachara
25/05/2022 01:45 pm