ಆನೇಕಲ್: ನಡೆದು ಹೋಗಿರೋದೆಲ್ಲ ಇತಿಹಾಸ. ಯಾವುದೇ ಒಂದು ಇತಿಹಾಸ ತಗೊಂಡ್ರು ಅದಕ್ಕೆ ಒಂದು ಸಾಕ್ಷಿ ಇದ್ದೇ ಇರುತ್ತೆ. ಶಿಲಾ ಶಾಸನ, ತಾಳೆಗರಿ ಶಾಸನ, ತಾಮ್ರ ಶಾಸನ, ಚಿನ್ನಾಭರಣ, ಇಂತಹ ಕುರುಹುಗಳ ಆಧಾರದ ಮೇಲೆ ರಾಜ ಮನೆತನಗಳು ಆಳ್ವಿಕೆ ಮಾಡುತ್ತಿದ್ದವು ಅಂತ ಹೇಳಬಹುದು. ಇವೆಲ್ಲ ಇತಿಹಾಸಕ್ಕೆ ಸಾಕ್ಷಾಧಾರಗಳು. ಅಂತಹ ನೂರಾರು ಸಾಕ್ಷಾಧಾರಗಳನ್ನು ಒಂದೇ ಮನೆಯಲ್ಲಿ ಸಂಗ್ರಹ ಮಾಡಿರೋದು ನಿಜಕ್ಕೂ ವಿಶೇಷ. ಅಷ್ಟಕ್ಕೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಇಲ್ಲೊಬ್ಬರು ಕ್ರಿಸ್ತಪೂರ್ವದಿಂದ ಹಿಡಿದು ಕ್ರಿಸ್ತಶಕದವರಗೆ ರಾಜ ಮನೆತನದ ಆಳ್ವಿಕೆಯ ಇತಿಹಾಸ ಮತ್ತು 150ಕ್ಕೂ ಹೆಚ್ಚು ದೇಶಗಳ ನಾಣ್ಯಗಳ ಸಂಗ್ರಹ ಮಾಡಿ ಮುಂದಿನ ಪೀಳಿಗೆಗೆ ಇತಿಹಾಸ ಸಾರುವ ಕಾರ್ಯವನ್ನ ಮಾಡುತ್ತಿದ್ದಾರೆ. 5000 ವರ್ಷಗಳ ಹಿಂದಿನ ಸಿದ್ದಾರ್ಥ,ಸಾಕ್ಯವಂಶ, ಚಂದ್ರಗುಪ್ತ ಮೌರ್ಯ ರಾಜ ಮನೆತನ ಬಳಕೆ ಮಾಡುತ್ತಿದ್ದ ನಾಣ್ಯಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಕ್ರಿಸ್ತಶಕ ಒಂದನೇ ಶತಮಾನದಿಂದ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಚೋಳರು, ಬನವಾಸಿ ಕದಂಬರು, ಬಹುಮನಿ ಸುಲ್ತಾನರು, ಟಿಪ್ಪು ಸುಲ್ತಾನ್ ಕಾಲದಲ್ಲಿದ್ದ ಚಿನ್ನದ ನಾಣ್ಯಗಳ ಸಂಗ್ರಹವೂ ಇಲ್ಲಿದೆ. ಅಷ್ಟಕ್ಕೂ ಇವೆಲ್ಲಾ ಕಾಣೋ ಸಿಗೋದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ನೌಕರನಾಗಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ರಾಜಗೋಪಾಲ್ ಎಂಬುವವರೇ ಈ ಮಹತ್ಕಾರ್ಯವನ್ನು ಮಾಡಿರುವವರು.
ಇನ್ನು ಅಂಚೆ ಚೀಟಿ ಪ್ರದರ್ಶಕರಾದ ರಾಜಗೋಪಾಲ್ ರವರು ತಮ್ಮ ಗುರುಗಳಾದ ಎಂ.ಆರ್. ಪ್ರಭಾಕರ್ ಪ್ರಭಾವದಿಂದ ಇತಿಹಾಸದ ಸಂರಕ್ಷಣೆಯನ್ನು ಮಾಡುತ್ತಾ ಬಂದಿದ್ದಾರೆ. ಇದರ ಜೊತೆಗೆ, ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಪುನೀತ್ ರಾಜಕುಮಾರ್ ಸೇರಿದಂತೆ ಹಲವು ಚಿತ್ರನಟರ ಅಪರೂಪದ ಫೋಟೋಗಳನ್ನು ಸಂಗ್ರಹಿಸಿದ್ದಾರೆ.
ಒಟ್ಟಾರೆ ಇತಿಹಾಸ ಸಾಕ್ಷ್ಯಾಧಾರಗಳನ್ನು ಸಂರಕ್ಷಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸಾಧಕನನ್ನು ಗುರುತಿಸಿ ಸರ್ಕಾರ ಪ್ರೋತ್ಸಾಹ ನೀಡಲಿ ಅನ್ನೋದೆ ನಮ್ಮ ಆಶಯ ..
-ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್, ಆನೇಕಲ್
PublicNext
18/08/2022 08:27 am