ದೊಡ್ಡಬಳ್ಳಾಪುರ: ಕೊರೊನಾ 3ನೇ ಅಲೆ ಆತಂಕ ನಡುವೆಯೂ ತಮಿಳುನಾಡಿನ ʼಓಂ ಶಕ್ತಿʼ ದೇವಸ್ಥಾನಕ್ಕೆ ದೊಡ್ಡಬಳ್ಳಾಪುರದ ಸಾವಿರಾರು ಭಕ್ತರು ಪ್ರವಾಸ ಹೋಗಿ ಬರುತ್ತಿದ್ದಾರೆ. ಮಂಡ್ಯದಿಂದ ಓಂಶಕ್ತಿ ದೇಗುಲಕ್ಕೆ ಹೋಗಿ ಬಂದ 30 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲಾಡಳಿತ ಮಾತ್ರ ತಲೆಕೆಡಿಸಿಕೊಂಡಿಲ್ಲ!
ತಮಿಳುನಾಡು ಮೇಲ್ ಮಾವತ್ತೂರಿನ ಓಂ ಶಕ್ತಿ ದೇವಾಲಯಕ್ಕೆ ಕರ್ನಾಟಕದಿಂದ ಮಹಿಳಾ ಮಾಲಾಧಾರಿಗಳು ಧಾರ್ಮಿಕ ಪ್ರವಾಸ ಹೋಗಿ ಬರುತ್ತಾರೆ. ದೊಡ್ಡಬಳ್ಳಾಪುರದಿಂದಲೂ ಸಾವಿರಾರು ಮಂದಿ ಹೋಗಿ ಬರುತ್ತಾರೆ. ಯುವ ಮುಖಂಡ ಧೀರಜ್ ಮುನಿರಾಜು ತಮ್ಮ ಹಣದಲ್ಲಿಯೇ ʼಓಂ ಶಕ್ತಿʼ ದೇವಸ್ಥಾನಕ್ಕೆ ಭಕ್ತರನ್ನು ಕಳಿಸಿ ಕೊಡುತ್ತಿದ್ದಾರೆ. ಡಿ.10ರಿಂದ ʼಓಂ ಶಕ್ತಿʼ ಪ್ರವಾಸಕ್ಕೆ ಕಳುಹಿಸಿದ್ದು ಈಗಾಗಲೇ 85 ಬಸ್ ಗಳಲ್ಲಿ 5 ಸಾವಿರಕ್ಕೂ ಹೆಚ್ಚು ಭಕ್ತರನ್ನು ಕಳಿಸಲಾಗಿದೆ.
ಜ.15ರ ವರೆಗೂ ಕಳಿಸುವ ವ್ಯವಸ್ಥೆ ಮಾಡಿದ್ದು, ಇನ್ನೂ 5 ಸಾವಿರಕ್ಕೂ ಹೆಚ್ಚು ಭಕ್ತರು ಈ ಪ್ರವಾಸಕ್ಕೆ ಹೊರಡಲು ಸಿದ್ಧತೆ ನಡೆಸಿದ್ದಾರೆ. ಇದೇ ಸಮಯದಲ್ಲಿ ಮಂಡ್ಯ ಜಿಲ್ಲೆಯಿಂದ ʼಓಂ ಶಕ್ತಿʼ ದೇಗುಲಕ್ಕೆ ಭೇಟಿ ನೀಡಿ ಬಂದಿದ್ದ 30ಕ್ಕೂ ಹೆಚ್ಚು ಭಕ್ತರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರವಾಸ ಹೊರಟಿರುವ ಭಕ್ತರನ್ನು ಮಾತನಾಡಿಸಿದಾಗ "ನಮಗೆಲ್ಲ ಡಬಲ್ ಡೋಸ್ ವ್ಯಾಕ್ಸಿನೇಷನ್ ಆಗಿದೆ. ಕೊರೊನಾ ಬಾರದಂತೆ ಆ ತಾಯಿಯೇ ಕಾಪಾಡುತ್ತಾಳೆ" ಎಂದು ಮುಗ್ಥಭಕ್ತಿ ವ್ಯಕ್ತಪಡಿಸುತ್ತಾರೆ. ʼಓಂ ಶಕ್ತಿʼ ಪ್ರವಾಸ ಬಗ್ಗೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರವಾಸಕ್ಕೆ ಹೋಗಿ ಬರುವುದರಿಂದ ಕೊರೊನಾ ವೇಗವಾಗಿ ಹರಡುತ್ತದೆ. ಜಿಲ್ಲಾಉಸ್ತುವಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
PublicNext
05/01/2022 12:27 pm