ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮೊದಲ ಡೋಸ್ ಲಸಿಕಾಕರಣ ಕಾರ್ಯದಲ್ಲಿ ಶೇ.100 ರಷ್ಟು ಪ್ರಗತಿ ಹೊಂದಿದ್ದು, ಈಗಾಗಲೇ ಶೇ. 98 ರಷ್ಟು ಎರಡನೇ ಡೋಸ್ ಲಸಿಕಾಕರಣದಲ್ಲಿ ಪ್ರಗತಿ ಸಾಧಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯು, ಮುಂದಿನ ಎರಡು ದಿನಗಳಲ್ಲಿ ಎರಡನೇ ಡೋಸ್ ಲಸಿಕಾಕರಣದಲ್ಲಿಯೂ ಶೇ. 100 ರಷ್ಟು ಪ್ರಗತಿ ಸಾಧಿಸಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 818593 ಜನರಿಗೆ (ಶೇ. 100 ರಷ್ಟು) ಮೊದಲ ಡೋಸ್ ಲಸಿಕೆ ಹಾಗೂ 802231 ಜನರಿಗೆ ಎರಡನೇ ಡೋಸ್ ಲಸಿಕೆ (ಶೇ. 98 ರಷ್ಟು) ಯನ್ನು ನೀಡಲಾಗಿದೆ.
ಕೋವಿಡ್ ಲಸಿಕಾಕರಣ ಮೊದಲ ಹಾಗೂ ಎರಡನೇ ಡೋಸ್ ಲಸಿಕಾಕರಣದಲ್ಲಿ ಸರಾಸರಿ ಪ್ರಗತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯು ಮೊದಲ ಸ್ಥಾನ, ಎರಡನೇ ಸ್ಥಾನ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮೂರನೇ ಸ್ಥಾನವನ್ನು ಕೊಡಗು ಜಿಲ್ಲೆ ಪಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಆರೋಗ್ಯ ತಪಾಸಣೆ, ಕೋವಿಡ್ ಲಸಿಕಾಕರಣ ಹಾಗೂ ಮನೆ ಬಾಗಿಲಿಗೆ ವೈದ್ಯಕೀಯ ಸೌಲಭ್ಯಗಳ ವಿತರಣೆ ಮಾಡುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿರುವ ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮ ರಾಜ್ಯದ ಇತರೆ ಜಿಲ್ಲೆಗಳೂ ಸಹಾ ಮಾದರಿಯಾಗಿದ್ದು, ಕೋವಿಡ್ ಲಸಿಕಾಕರಣ ಪ್ರಗತಿಯಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರವಹಿಸಿದೆ. ಲಸಿಕಾಕರಣದ ಯಶಸ್ವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರೂ ನೀಡಿರುವ ಸಹಕಾರವನ್ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮತ್ತು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಶಂಸಿದ್ದಾರೆ.
PublicNext
28/01/2022 01:58 pm