ಬೆಂಗಳೂರು: ಎಣ್ಣೆ ನಶೆಯಲ್ಲಿ ಅನುಚಿತ ವರ್ತನೆ ತೋರುತ್ತಿದ್ದವರನ್ನ ಪ್ರಶ್ನಿಸಲು ಮುಂದಾಗಿದ್ದ ಪೊಲೀಸರ ಮೇಲೆಯೇ ಆಫ್ರಿಕನ್ ಮಹಿಳೆಯರು ಹಲ್ಲೆ ನಡೆಸಿರುವ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಗ್ರೇಡ್ ರಸ್ತೆಯಲ್ಲಿ ತಡರಾತ್ರಿ ನಡೆದಿದೆ.
ನೈಜೀರಿಯಾ ಮೂಲದ ಪೀಸ್ ಪರ್ನಾಷ್ ಹಾಗೂ ಜೂಲಿಯ ವಾಂಜೀರೋ ಸೇರಿದಂತೆ ಮೂವರು ಮಹಿಳೆಯರು ನಗರದ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ವಿಕೇಂಡ್ ಆಗಿದ್ದರಿಂದ ಬಿಗ್ರೇಡ್ ರೋಡ್‌ನಲ್ಲಿರುವ ನಿನ್ನೆ ಪಬ್ ಅಂಡ್ ರಸ್ಟೋರೆಂಟ್‌ಗೆ ಬಂದಿದ್ದರು. ಕಂಠಪೂರ್ತಿ ಕುಡಿದ ಈ ನಶೆ ರಾಣಿಯರು ನಿಗದಿತ ಅವಧಿ ಮುಗಿದರೂ ಸ್ಥಳದಿಂದ ಹೋಗದೆ ಪಬ್ ಸಿಬ್ಬಂದಿ ಜೊತೆ ತಗಾದೆ ತೆಗೆದಿದ್ದರು. ಇದೇ ವೇಳೆ ರೌಂಡ್ಸ್‌ನಲ್ಲಿ ಹೊಯ್ಸಳ ಪೊಲೀಸರು ಗಮನಿಸಿ ವಿಚಾರಿಸಿದ್ದಾರೆ. ಪಾನಮತ್ತರಾಗಿದ್ದ ವಿದೇಶಿಯರಿಗೆ ಪ್ರಶ್ನಿಸಿ ಮನೆಗೆ ಹೋಗುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಕೆರಳಿದ ಮಹಿಳೆಯರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ನೋಡನೋಡುತ್ತಿದ್ದಂತೆ ಮಾತಿನ ಚಕಮಕಿ ನಡೆಸಿದ ಮಹಿಳೆಯರು ಪೊಲೀಸರ ಮೇಲೆಯೇ ಕೈ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಮಹಿಳಾ ಪಿಎಸ್ಐ ಒಬ್ಬರನ್ನು ಕರೆಯಿಸಿ ನೌಟಂಕಿ ಆಟ ಪ್ರದರ್ಶಿಸಿದ ಇವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
PublicNext
29/08/2022 06:00 pm