ಬೆಂಗಳೂರು:ಕಳೆದ ಎರಡು ದಿನಗಳ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅದೇ ಮಾದರಿಯಲ್ಲಿ ಕಿಡಿಗೇಡಿಗಳು ಪಶುಸಂಗೋಪನಾ ಇಲಾಖೆ ಸಚಿವರ ನಕಲಿ ಸಹಿ ಬಳಸಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದ ಕಿಡಿಗೇಡಿಗಳ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ಕಿಡಿಗೇಡಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.ಪಶು ಸಂಗೋಪನಾ ಇಲಾಖೆಯಲ್ಲಿ ಪ್ರಥಮ ಹಾಗೂ ದ್ವಿತೀಯ ದರ್ಜೆ ಹುದ್ದೆಗಳು ಸೇರಿದಂತೆ ವಿವಿಧ ವೃಂದಗಳ ಒಟ್ಟು 93 ಹುದ್ದೆಗಳಿಗೆ ಆರೋಪಿಗಳು ನಕಲಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ.
ವಿಶೇಷ ನೇರ ನೇಮಕಾತಿ ನಿಯಮ-2019 ರ ಪ್ರಕಾರ 93 ಅಭ್ಯರ್ಥಿಗಳ ತಾತ್ಕಾಲಿಕ ಹಾಗೂ ಅಂತಿಮ ಪಟ್ಟಿ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.ಆಕ್ಷೇಪಣೆ ಸಲ್ಲಿಸುವರು ಹೆಬ್ಬಾಳದಲ್ಲಿರುವ ಇಲಾಖೆ ಪ್ರಧಾನ ಕಚೇರಿಯಲ್ಲಿರುವ ಆಯ್ಕೆ ಸಮಿತಿ ಕಾರ್ಯದರ್ಶಿ ಸಂಪರ್ಕಿಸಬಹುದು. ಮಾಹಿತಿಗಾಗಿ ರಾಜ್ಯಪತ್ರದಲ್ಲಿಯೂ ಉಲ್ಲೇಖಿಸಿದ್ದರು. ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ವಿ ಚವ್ಹಾಣ ಹೆಸರಿನಲ್ಲಿ ನಕಲಿ ಸಹಿ ಮಾಡಿ ನಕಲಿ ಅಧಿಸೂಚನೆ ಹೊರಡಿಸಿದ್ದಾರೆ.
ಇದರ ಪ್ರತಿಯನ್ನು ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಗೂ ಆರೋಪಿಗಳು ಸಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ಅರಿತ ಇಲಾಖೆ ಹಿರಿಯ ಅಧಿಕಾರಿಗಳು ಪ್ರಥಮ ಹಾಗೂ ದ್ವಿತೀಯ ದರ್ಜೆ ಸೇರಿದಂತೆ ಯಾವುದೇ ಹುದ್ದೆಗಳಿಗೆ ಇಲಾಖೆಯಿಂದ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದರಬೇಕು ಎಂದು ಮನವಿ ಮಾಡಿದ್ದಾರೆ. ಆರೋಪಿತರ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
03/08/2022 06:38 pm