ಬೆಂಗಳೂರು: ನಮ್ಮನ್ನ ಹುಡುಕಬೇಡಿ ಎಂದು ಪೋಷಕರಿಗೆ ಕರೆ ಮಾಡಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ನಾಪತ್ತೆಯಾಗಿರುವ ಪ್ರಕರಣ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದೆ.
19 ವರ್ಷದ ಹರ್ಷಿತಾ ಹಾಗೂ ಮರಿಯಾ ವೈಶಾಲಿ ನಾಪತ್ತೆಯಾಗಿರುವ ವಿದ್ಯಾರ್ಥಿನಿಯರು. ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಹರ್ಷಿತಾ ಜುಲೈ 25ರಂದು ಸಂಜೆ 5 ಗಂಟೆಗೆ ಸ್ನೇಹಿತೆ ಮರಿಯಾ ವೈಶಾಲಿಯನ್ನ ಭೇಟಿಯಾಗಲು ತೆರಳಿದ್ದವಳು ಮನೆಗೆ ಬರುವುದು ವಿಳಂಬವಾಗಿತ್ತು. ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದರಿಂದ ಹರ್ಷಿತಾ ಪೋಷಕರು ಮರಿಯಾ ವೈಶಾಲಿಗೆ ಕರೆ ಮಾಡಿ ವಿಚಾರಿಸಿದಾಗ ವಸಂತನಗರದಲ್ಲಿದ್ದೇವೆ ಸ್ವಲ್ಪ ಸಮಯದಲ್ಲಿ ಮನೆಗೆ ಬರುತ್ತಿದ್ದೇವೆ ಎಂದಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ಮರಿಯಾಳ ಫೋನ್ ಸ್ವಿಚ್ ಆಫ್ ಆದಾಗ ಹರ್ಷಿತಾಳ ಪೋಷಕರು ಮರಿಯಾ ವೈಶಾಲಿಯ ಪೋಷಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಈ ವೇಳೆ ಮರಿಯಾ 'ನಾವಿನ್ನು ಮನೆಗೆ ಬರಲ್ಲ ಇನ್ನು ಹುಡುಕಬೇಡಿ' ಎಂದು ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಇಬ್ಬರ ಪೋಷಕರು ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರಿಂದ ಹುಡುಕಾಟ ಮುಂದುವರೆದಿದೆ.
PublicNext
28/07/2022 09:11 am