ಬೆಂಗಳೂರು : ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಾರತ್ ಹಳ್ಳಿ ಠಾಣೆ ವ್ಯಾಪ್ತಿಯ ಮಂಜುನಾಥ ಲೇಔಟ್ ನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಒಂಟಿಯಾಗಿ ವಾಸಿಸುತ್ತಿದ್ದ ಅತುಲ್ ಸುಭಾಷ್, ಸುಮಾರು 40 ಪುಟಗಳ ಡೆತ್ ನೋಟ್ ಬರೆದಿಟ್ಟು, ಸಾವಿನ ಬಳಿಕ ಮೃತದೇಹ ಗಮನಿಸುವವರಿಗೆ ವ್ಯವಸ್ಥಿತವಾಗಿ ಸೂಚನೆಗಳನ್ನ ನೀಡಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಅತುಲ್ ಸುಭಾಷ್ ವಿರುದ್ಧ ಆತನ ಪತ್ನಿ ಉತ್ತರ ಪ್ರದೇಶದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಇದರಿಂದ ಮಾನಸಿಕವಾಗಿ ನೊಂದಿದ್ದ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ.
ಆತ್ಮಹತ್ಯೆಗೆ ಶರಣಾಗುವುದಕ್ಕೂ ಹಿಂದಿನ ಮೂರು ದಿನಗಳು ತಾನು ಏನೇನು ಮಾಡಬೇಕು ಎಂದು ಪಟ್ಟಿ ಸಿದ್ಧಪಡಿಸಿದ್ದ ಅತುಲ್ ಸುಭಾಷ್, ಅದರಂತೆ ಬಾಕಿಯಿರುವ ಪಾವತಿಗಳು, ಮಾಡಬೇಕಿರುವ ಕೆಲ ಕೆಲಸಗಳನ್ನ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾನೆ. ಅಲ್ಲದೆ ತನ್ನ ಸಾವಿನ ಬಳಿಕ ನೋಡಬೇಕಿರುವ ಡೆತ್ ನೋಟ್, ಮನೆಯ ಕೀ ಎಲ್ಲಿರಿಸಲಾಗಿದೆ, ಯಾವ್ಯಾವ ಕೆಲಸಗಳನ್ನ ಪೂರ್ಣಗೊಳಿಸಲಾಗಿದೆ ಎಂಬುದರ ಮಾಹಿತಿ ಸಿಗುವಂತೆ ಪಟ್ಟಿಯಲ್ಲಿ ತಿಳಿಸಿದ್ದಾನೆ. ಹಾಗೂ ಗಿಫ್ಟ್ ಬಾಕ್ಸ್ ಮನೆಯಲ್ಲಿಟ್ಟು, ತನ್ನ ನಾಲ್ಕು ವರ್ಷದ ಪುತ್ರಿಗೆ ತಲುಪಿಸುವಂತೆ ಸೂಚಿಸಿದ್ದಾನೆ. ನಂತರ JUSTICE IS DUE ಎಂಬ ಬರಹವಿರುವ ಪೋಸ್ಟರ್, ಹಾಗೂ ಪೂರ್ಣಗೊಳಿಸಿರುವ ತನ್ನ ಕೆಲಸಗಳ ಪಟ್ಟಿಯನ್ನ ಗೋಡೆಗೆ ಅಂಟಿಸಿ ನಂತರ ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿದೆ.
ಘಟನಾ ಸ್ಥಳಕ್ಕೆ ಮಾರತ್ ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಾಗೂ ಮಾರತ್ ಹಳ್ಳಿ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
PublicNext
09/12/2024 06:28 pm