ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೈಸ್ ಪುಲ್ಲಿಂಗ್ ದಂಧೆಗೂ ಬಂತು ಹೈಟೆಕ್ ಸ್ಪರ್ಶ!; ಐವರು ಖದೀಮರ ಸೆರೆ

ಬೆಂಗಳೂರು: ರೈಸ್ ಪುಲ್ಲಿಂಗ್ ದಂಧೆ ಹೊಸದೇನೂ ಅಲ್ಲ. ಆದ್ರೂ, ಈ ಬಾರಿ ಈ ದಂಧೆಕೋರರು ಹೈಟೆಕ್ ಸ್ಪರ್ಶ ನೀಡಿದ್ದಾರೆ.‌‌ ಬಯೋಮೆಟ್ರಿಕ್ ಸಿಸ್ಟಂ‌ ಅಳವಡಿಸಿ ವ್ಯವಸ್ಥಿತ ಪ್ಯಾಕ್ ಮಾಡಿ ಹೈಟೆಕ್ ಮಾದರಿಯಲ್ಲಿ ರಾಜಧಾನಿಯಲ್ಲಿ ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸ್ರು ಪತ್ತೆ ಮಾಡಿದ್ದಾರೆ.

ಜನರ ಮೂಢನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು 2-3 ವರ್ಷಗಳಿಂದ ದಂಧೆ ನಡೆಸುತ್ತಿದ್ದ ವಂಶಿಸಾಯಿ, ರಾಮ್ ಸಾಯಿ ನಾಯ್ಡು, ವರುಣ್, ಕೃಷ್ಣ ಹಾಗೂ ಅಶೋಕ್ ಬಂಧಿತರಾಗಿದ್ದು, ಇವರಿಂದ ರೈಸ್ ಪುಲ್ಲಿಂಗ್‌ ಮಿಷನ್ ಸೇರಿದಂತೆ ಇನ್ನಿತರ ವಸ್ತು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ‌.

ಆರೋಪಿಗಳೆಲ್ಲರೂ ಬಿ.ಟೆಕ್, ಏರೋನಾಟಿಕ್ ಇಂಜಿನಿಯರ್ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ಕೆಲಸ ಸಿಗದೆ ನಿರುದ್ಯೋಗಿಗಳಾಗಿದ್ದ ಆರೋಪಿಗಳು, ಸುಲಭವಾಗಿ ಹಣ ಸಂಪಾದನೆ ಮಾಡಲು ಅಕ್ರಮದ ದಾರಿ ಹಿಡಿದಿದ್ದರು. ಇತ್ತೀಚೆಗೆ ಸೋಲದೇವನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಆರೋಪಿಗಳು, ಸಾರ್ವಜನಿಕರನ್ನು ಸಂಪರ್ಕಿಸಿ ಅಮೆರಿಕದ ಎಲ್‌ ಆಂಡ್ ಎಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸುತ್ತಿದ್ದರು.

ತಮ್ಮ ಬಳಿ ಬೆಲೆ ಬಾಳುವ ರೈಸ್ ಪುಲ್ಲಿಂಗ್ ಮಾಡುವ ಸಾಧನವಿದ್ದು, ಇದನ್ನು ಏರೋನಾಟಿಕ್ಸ್ ಇಂಜಿನಿಯರಿಂಗ್, ಬಾಹ್ಯಾಕಾಶ ರಾಕೆಟ್ ಉಡಾವಣೆಗೆ ಬಳಸಲಿದ್ದು ವಿದೇಶದಲ್ಲಿ ಹೆಚ್ಚು ಡಿಮ್ಯಾಂಡ್ ಇದೆ ಎಂದು ಯಾಮಾರಿಸುತ್ತಿದ್ದರು. ಇದೇ ರೀತಿ ನಗರದ ಮಹಿಳೆಗೆ 35 ಲಕ್ಷ ಮಾರಾಟ ಮಾಡಲು ಡೀಲ್‌ ಕುದುರಿಸಿಕೊಂಡ ಆರೋಪಿಗಳು ಮುಂಗಡವಾಗಿ ಐದು ಲಕ್ಷ ಪಡೆದಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದೆ‌.

ರೈಸ್ ಪುಲ್ಲಿಂಗ್ ಮಾರಾಟ ಮಾಡಲು ಖತರ್ನಾಕ್ ಐಡಿಯಾ ರೂಪಿಸಿದ್ದ ಆರೋಪಿಗಳು, ತಾಮ್ರದ‌ ಬಿಂದಿಗೆಯನ್ನು ಕಾರ್ಬನ್ ಬಾಕ್ಸ್ ನಿಂದ ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ದೊಡ್ಡ ಪೆಟ್ಟಿಗೆಯಲ್ಲಿ ಇಟ್ಟು ಅದಕ್ಕೆ ಬಯೋಮೆಟ್ರಿಕ್ ರೀತಿ ಫಿಂಗರ್ ಪ್ರಿಂಟ್ ಸಿಸ್ಟಂ ಅಳವಡಿಸಿದ್ದರು. ಅದಕ್ಕೆ ಪಾಸ್ ವರ್ಡ್ ಸಹ ಇಟ್ಟುಕೊಂಡಿದ್ದರು.

ರೈಸ್ ಪುಲ್ಲಿಂಗ್ ಮಿಷನ್ ನೋಡಬೇಕಾದರೆ ಮುಂಗಡವಾಗಿ ಇಂತಿಷ್ಟು ಹಣ ನೀಡಬೇಕಾಗಿತ್ತು. ಹೀಗೆ ಹೈಟೆಕ್‌ ಮಾದರಿಯಲ್ಲಿ ದಂಧೆ ನಡೆಸಿ ಆಂಧ್ರ ಹಾಗೂ ಕರ್ನಾಟಕದಲ್ಲಿ ಹಲವರಿಗೆ ಲಕ್ಷಾಂತರ ರೂ. ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Edited By : Manjunath H D
PublicNext

PublicNext

21/07/2022 05:08 pm

Cinque Terre

32.6 K

Cinque Terre

0