ಬೆಂಗಳೂರು: ರಸ್ತೆ ಪಕ್ಕದಲ್ಲಿ ಕುಳಿತಿದ್ದ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಕಣ್ಮುಂದೆ ಇದ್ದ ನಾಯಿಯನ್ನು ನೋಡಿಯೂ ಚಾಲಕ ನಾಯಿಯ ಮೇಲೆ ಕಾರು ಹತ್ತಿಸಿದ್ದು, ನಾಯಿ ನರಳಿ ನರಳಿ ರಸ್ತೆಯಲ್ಲೇ ಜೀವ ಬಿಟ್ಟಿದೆ.
12 ವರ್ಷಗಳಿಂದ ಈ ನಾಯಿ ಇಂದಿರಾನಗರದ 2ನೇ ಕ್ರಾಸ್ನಲ್ಲಿರುವ ಈ ಮನೆಯ ಬಳಿಯೇ ವಾಸವಿತ್ತು. ಇದಕ್ಕೆ ಮನೆ ಮಾಲಿಕರು ಬ್ರೌನಿ ಎಂದು ಹೆಸರು ಕೂಡ ಇಟ್ಟಿದ್ರು. ಆದ್ರೆ ಕಳೆದ 5ರಂದು ಯಮನ ರೂಪದಲ್ಲಿ ಎದುರಾಗಿದ್ದ ಆ ಹೋಂಡಾ ಸಿಟಿ ಕಾರಿನ ಚಾಲಕ ಅಲ್ಲೇ ಸುಮಾರು ಹೊತ್ತು ಕಾರನ್ನು ಪಾರ್ಕ್ ಮಾಡಿದ್ದ. ಆ ಕಾರಿನ ಮುಂದೆ ಸ್ವಲ್ಪ ದೂರಲ್ಲಿ ಕುಳಿತಿದ್ದ ನಾಯಿಯನ್ನೂ ನೋಡಿದ್ದ. ಆದ್ರೆ ಕಾರು ಏರಿ ನಂತ್ರ ಆ ನಾಯಿಯ ಮೇಲೇ ಕಾರನ್ನು ಹತ್ತಿಸಿದ್ದಾನೆ. ನಾಯಿ ನೋವಿನಿಂದ ನರಳುತ್ತಿದ್ದರೂ ಅದನ್ನು ನೋಡದೆ ಹಾಗೆ ಮುಂದೆ ಸಾಗಿದ್ದಾನೆ.
ಬ್ರೌನಿ ಕಿರುಚಾಡಿದ್ದನ್ನ ಕೇಳಿಸಿಕೊಂಡ ಮನೆಯ ಮಾಲಕಿ ಸ್ನೇಹಾ ಮನೆಯಿಂದ ಹೊರಗೆ ಬಂದು ಕಾರು ಹತ್ತಿದ್ದನ್ನು ನೋಡಿ, ಅವರನ್ನು ನಿಲ್ಲಿಸ್ತಾರೆ. ಅಷ್ಟರಲ್ಲಿ ಬ್ರೌನಿ ಕೊನೆಯುಸಿರೆಳೆದಿದೆ. ಕಾರಿನಿಂದ ಇಳಿದ ಚಾಲಕ ಹಾಗೂ ಕಾರಿನಲ್ಲಿದ್ದ ಮಹಿಳೆ ಇನ್ನೇನು ನಾಯಿ ಸತ್ತೋಯ್ತಲ್ಲ ನಡೀರಿ ಅಂತ ಹೊರಟು ಬಿಡ್ತಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಂತರ ಆರೋಪಿಯ ವಿರುದ್ಧ ಸ್ನೇಹಾ, ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂದಿರಾನಗರದ ಮೃತ ನಾಯಿಯ ದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಅದನ್ನು ಮನೆಯ ಮಾಲಕಿ ಸ್ನೇಹಾ ತಮ್ಮ ಮನೆಯ ಎದುರೇ ಮಣ್ಣು ಮಾಡಿದ್ದಾರೆ. ಇನ್ನು ಕಾರು ಹತ್ತಿಸಿದ ಆರೋಪಿಯನ್ನ ಇಂದಿರಾನಗರ ಪೊಲೀಸ್ರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
PublicNext
07/07/2022 06:23 pm